ಬೆಂಗಳೂರು: ಸರ್ಕಾರ ಕೊಟ್ಟ ಹಣ ಖರ್ಚು ಮಾಡದ ಅಧಿಕಾರಿಗಳಿಗೆ ಸಿಎಂ ಕ್ಲಾಸ್ ತೆಗೆದುಕೊಂಡಿದ್ದಾರೆ.
ಸಿಎಂ ನೇತೃತ್ವದಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಸಭೆಯಲ್ಲಿ ನಡೆಸಿದ ಸಿಎಂ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿ ಇಂದು ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದಸಿಎ ತರಾಟೆಗೆ ತೆಗೆದುಕೊಂಡಿದ್ದಾರೆ. ವರ್ಷದ ಕೊನೆ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ. ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಹಂಚಲು ಕೊಟ್ಟ ಹಣವನ್ನು ಖರ್ಚು ಮಾಡದೆ ಇಟ್ಟುಕೊಂಡು ಕೂರುವುದಕ್ಕಾ ನೀವು ಇರುವುದು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಗೆ ಸೂಚಿಸಿದ್ದಾರೆ.
2024-25 ನೇ ಸಾಲಿನ ಆಯವ್ಯಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ 5,377 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದುವರೆಗೆ ಅನುದಾನ 3,631 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಹಣ ಕೂಡ ಪೂರ್ತಿ ಖರ್ಚು ಮಾಡದ ಬಗ್ಗೆ ತೀವ್ರವಾಗಿ ಕಿಡಿಕಾರಿದ್ದಾರೆ.
ಇಲಾಖೆಗೆ ಸರ್ಕಾರದಿಂದ ಕೊಟ್ಟ ಹಣದಲ್ಲಿ 2,892 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಉಳಿದದ್ದು ಹಾಗೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.








