ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಕೇಂದ್ರ ಸಚಿವ ಕುಮಾರಸ್ವಾಮಿ 60% ಕಮಿಷನ್ ಆರೋಪ ಮುಂದುವರೆಸಿದ್ದಾರೆ.
60% ಕಮಿಷನ್‌ಗೆ ದಾಖಲೆ ಕೊಡಿ ಎಂದಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಸಚಿವರಿಗೆ ತಿರುಗೇಟು ನೀಡಿದ್ದಾರೆ. ಯಾವ ಯಾವ ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಹಣ ಬಾಕಿ ಇದೆ ಎಂದು ಅಂಕಿ ಅಂಶ ಬಿಡುಗಡೆ ಮಾಡಿದ್ದಾರೆ.
ದಾಖಲೆ ಕೊಡಿ, ದಾಖಲೆ ಕೊಡಿ ಎನ್ನುತ್ತಿದ್ದೀರಿ ಇಲ್ನೋಡಿ ಎಂದು ದಾಖಲೆ ಬಿಡುಗಡೆ ಮಾಡಿದ್ದಾರೆ. ನಿಮ್ಮ ಸರ್ಕಾರ ಗುತ್ತಿಗೆದಾರರನ್ನು ಎಷ್ಟು ನಿರ್ಲಜ್ಜವಾಗಿ ಸುಲಿಗೆ ಮಾಡುತ್ತಿದೆ ಎನ್ನುವುದಕ್ಕೆ ಈ ಸಾಕ್ಷಿಗುಡ್ಡೆ ಸಾಕ್ಷ್ಯ ಸಾಲದೇ ಮುಖ್ಯಮಂತ್ರಿಗಳೇ? ಎಂದು ಸಚಿವರು ಪ್ರಶ್ನೆ ಮಾಡಿದ್ದಾರೆ. ಗುತ್ತಿಗೆದಾರರ 32 ಸಾವಿರ ಕೋಟಿ ರೂ. ಬಿಲ್ ಬಾಕಿ ಇದೆ. ಈ ಬಾಕಿ ಮೇಲೆ ನಿಮ್ಮ ಪರ್ಸಂಟೇಜ್ ಕರಿನೆರಳು ಕೂಡ ಬಿದ್ದಿದೆ. ಸಾಲಸೋಲ ಮಾಡಿ ಕಾಮಗಾರಿ ಮಾಡಿರುವ ಗುತ್ತಿಗೆದಾರರು ದಯಾಮರಣಕ್ಕೆ ಅರ್ಜಿ ಬರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಿನಾಕಾರಣ ಸಮರ್ಥನೆ ಲಾಯಕ್ಕಲ್ಲ. ಗುತ್ತಿಗೆದಾರರ ಬದುಕು ಉಳಿಸಿ ರಾಜ್ಯದ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ಇದ್ದಿದ್ದನ್ನು ಇದ್ದಹಾಗೆ ಹೇಳಿದ್ದೇನೆ. ನೀವೂ, ನಿಮ್ಮ ಸಂಪುಟ ನನ್ನ ಮೇಲೆ ವಾಗ್ಯುದ್ಧಕ್ಕಿಳಿದರೆ ಉಪಯೋಗವೇನು? ಎಂದು ಗುಡುಗಿದ್ದಾರೆ.








