ಮಕರ ಸಂಕ್ರಾಂತಿ ವರ್ಷದ ಮೊದಲ ಹಬ್ಬವಾಗಿದೆ ಮತ್ತು ಇದು ಸೂರ್ಯನ ಆರಾಧನೆಗೆ ಸಮರ್ಪಿತವಾಗಿದ್ದು, ಸೂರ್ಯ ದೇವರಿಗೆ ಪೂಜೆಯನ್ನು ಸಲ್ಲಿಸಲು ಒಂದು ವಿಶೇಷ ದಿನವಾಗಿದೆ. ದಕ್ಷಿಣದಿಂದ ಉತ್ತರದ ಕಡೆಗೆ ಪ್ರಯಾಣಮಾಡಿ ಮಕರ ರಾಶಿಗೆ ಪ್ರವೇಶಿಸುವ ಸೂರ್ಯ, ತನ್ನ ಮಗನಾದ ಶನಿ ಮಹಾರಾಜನನ್ನು ಭೇಟಿಯಾಗುವ ದಿನವೇ ಮಕರ ಸಂಕ್ರಾಂತಿ ಆಗಿದೆ. ಸೂರ್ಯನ ಕಿರಣಗಳು ಮಳೆ ಬೀರುವುದಕ್ಕೂ, ಬೆಳೆ ಬೆಳೆಯುವುದಕ್ಕೂ, ಇಳೆ ಬೆಳಗಲು ಕಾರಣವಾಗಿದೆ.
ಈ ಹಬ್ಬದ ಉದ್ದೇಶವು ಭೂಮಿಗೆ ಕೃತಜ್ಞತೆ, ಒಗ್ಗಟ್ಟನ್ನು ಮತ್ತು ಸಂತೋಷವನ್ನು ತಲುಪಿಸಲು ಪ್ರೇರಣೆಯಾಗಿರುತ್ತದೆ. ವಾತಾವರಣದಲ್ಲಿನ ವೈರಸ್, ಬ್ಯಾಕ್ಟೀರಿಯಾ ಮತ್ತು ಕ್ರಿಮಿಗಳನ್ನು ಸೂರ್ಯನ ತಾಪದಿಂದ ನಾಶ ಪಡಿಸುವಂತೆ, ಶರೀರದಲ್ಲಿ ಪ್ರವೇಶಿಸುವ ಕ್ರಿಮಿಗಳನ್ನು ಬಲಹೀನಗೊಳಿಸಿ ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ ಸಮಯ ಇದು. ಸೂರ್ಯನಿಗೆ ಬೆಲ್ಲ ಮತ್ತು ಶನಿಗೆ ಎಳ್ಳು ಶ್ರೇಷ್ಠವಾದುದು, ಆದ್ದರಿಂದ ಈ ಹಬ್ಬದಲ್ಲಿ ಬೆಲ್ಲ, ಹುರಿದ ಎಳ್ಳು, ಕಬ್ಬಿನ ತುಂಡು, ಒಣಕೊಬ್ಬರಿ, ಹುರಿಗಡಲೆ ಮತ್ತು ಕಡಲೇಕಾಯಿ ಬೀಜಗಳನ್ನು ಸೇರಿಸಿ ಎಳ್ಳು-ಬೆಲ್ಲ ತಯಾರಿಸಿ ಹಂಚುವ ಪರಂಪರೆ ಇದೆ.
ಎಳ್ಳು-ಬೆಲ್ಲದ ಪ್ರಯೋಜನಗಳು:
ಎಳ್ಳು: ಎಳ್ಳಿನಲ್ಲಿ ಲಭಿಸುವ ಕ್ಯಾಲ್ಸಿಯಂ, ಮೆಗ್ನೀಷಿಯಂ, ಫೈಬರ್ ಅಂಶಗಳು ಹಚ್ಚು ಬೆಳೆಗಳನ್ನು ಬಲಪಡಿಸಿ, ಶ್ವಾಸಕೋಶವನ್ನು ಶುದ್ಧಗೊಳಿಸಿ, ರಕ್ತದೊತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ ತ್ವಚೆ, ಕೂದಲು, ದಂತಪಂಕ್ತಿ ಗಟ್ಟಿಯಾಗಲು ಸಹಕಾರಿಯಾಗಿದೆ.
ಬೆಲ್ಲ: ಬೆಲ್ಲದಲ್ಲಿ ಆಂಟಿ ಆಕ್ಸಿಡೆಂಟ್ಗಳು, ಕ್ಯಾಲ್ಸಿಯಂ, ಕಬ್ಬಿಣ, ಜಿಂಕ್, ಫಾಸ್ಫರಸ್, ಪೊಟ್ಯಾಷಿಯಂ, ಸೆಲೆನಿಯಂ ಇದ್ದು, ಇದು ಲಿವರ್ ಅನ್ನು ಸ್ವಚ್ಛಗೊಳಿಸಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಇವು ಉಸಿರಾಟದ ಸಮಸ್ಯೆಗಳಿಗೆ ಸಹಾಯಕವಾಗಿವೆ.
ಒಣಕೊಬ್ಬರಿ: ಒಣಕೊಬ್ಬರಿಯಲ್ಲಿನ ನಾರಿನಂಶ ಜೀರ್ಣಕ್ರಿಯೆಯನ್ನು ಹೆಚ್ಚಿಸಿ, ಮಲಬದ್ಧತೆಯನ್ನು ನಿವಾರಿಸುತ್ತದೆ. ಇದು ಆಂಟಿಫಂಗಲ್ ಮತ್ತು ಆಂಟಿವೈರಲ್ ಆಗಿರುವುದರಿಂದ ಚರ್ಮದ ಸೋಂಕನ್ನು ತಡೆಯುತ್ತದೆ.
ಕಡಲೇಬೀಜ: ಕಡಲೇಬೀಜವು ಒಮೆಗಾ 6 ಫ್ಯಾಟಿಅಂಶ ಮತ್ತು ವಿಟಮಿನ್ ‘ಬಿ’ ಯಲ್ಲಿರುವುದರಿಂದ, ಇದು ತಲೆ, ಕೂದಲು ಮತ್ತು ದೇಹದ ಭಾಗಗಳ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಕಬ್ಬಿನ: ಕಬ್ಬಿನಲ್ಲಿನ ಎಲೆಕ್ಟ್ರೋಲೇಟ್ಗಳು, ಕ್ಯಾಲ್ಸಿಯಂ ಮತ್ತು ಕಬ್ಬಿಣವು ಲಿವರ್ ಗೆ ಹಿತಕಾರಿಯಾಗಿದೆ. ಇದು ಶೀತ, ಕೆಮ್ಮು, ಜ್ವರವನ್ನು ತಡೆಯುವಲ್ಲಿ ಸಹಾಯಕವಾಗಿದೆ.
ಹುರಿಗಡಲೆ: ಹುರಿಗಡಲೆಯಲ್ಲಿನ ಪ್ರೋಟೀನ್, ಫ್ಯಾಟಿ ಆಮ್ಲಗಳು, ವಿಟಮಿನ್ಸ್, ಕಬ್ಬಿಣ, ನಾರಿನಂಶ, ಫಾಸ್ಫರಸ್, ಫೋಲೇಟ್ ಹೆಚ್ಚಿರುವುದರಿಂದ, ಇದು ಹೃದಯ ಮತ್ತು ಶ್ವಾಸಕೋಶ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಈ ಪದಾರ್ಥಗಳನ್ನು ವಸಂತ ಋತು ಆರಂಭದವರೆಗೆ ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯವನ್ನು ಕಾಪಾಡಬಹುದು.








