ಪ್ರಯಾಗ್‌ರಾಜ್: ಮಹಾ ಕುಂಭ ಮೇಳದಲ್ಲಿ (Maha Kumbh Mela) ದೇಶ ಅಷ್ಟೇ ಅಲ್ಲದೇ ವಿದೇಶಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಈ ಮಧ್ಯೆ 7 ಅಡಿ ಎತ್ತರದ ರಷ್ಯಾದ ಬಾಬಾ ಎಲ್ಲರ ಗಮನ ಸೆಳೆದಿದ್ದಾರೆ.
ಭಾರತದ ಬೃಹತ್ ಆಧ್ಯಾತ್ಮಿಕ ಸಭೆಯಲ್ಲಿ ಯಾತ್ರಿಕರು, ಸಾಧು-ಸಂತರು, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಪವಿತ್ರ ಸಂಗಮ ದಡದಲ್ಲಿ ಸೇರಿದ್ದಾರೆ. ಈ ಆಧ್ಯಾತ್ಮಕಿ ಸಭೆಯಲ್ಲಿ ಆತ್ಮ ಪ್ರೇಮ್ ಗಿರಿ ಮಹಾರಾಜ್ ತಮ್ಮ ದೇಹರಚನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಈಗ ಅವರು ‘ಸ್ನಾಯು ಬಾಬಾ’ ಎಂದೇ ಜನಪ್ರಿಯರಾಗಿದ್ದಾರೆ.
ಏಳು ಅಡಿ ಎತ್ತರ ಇರುವ ಬಾಬಾ, ಕೇಸರಿ ವಸ್ತ್ರ, ರುದ್ರಾಕ್ಷಿ ಮಾಲೆ ಧರಿಸಿ ಭಾಗವಹಿಸಿದ್ದಾರೆ. ಹೀಗಾಗಿ ಅವರನ್ನು ಹಲವರು ಹಿಂದೂ ಪುರಾಣಗಳಲ್ಲಿನ ಭಗವಾನ್ ಪರಶುರಾಮರ ಆಧುನಿಕ ಅವತಾರ ಎಂದೇ ಬಣ್ಣಿಸಿದ್ದಾರೆ.
ರಷ್ಯಾ ಮೂಲದ ಗಿರಿ, 30 ವರ್ಷಗಳ ಹಿಂದೆ ಸನಾತನ ಧರ್ಮ ಸ್ವೀಕರಿಸಿದ್ದಾರೆ. ಶಿಕ್ಷಕರಾಗಿದ್ದ ಅವರು ತಮ್ಮ ವೃತ್ತಿ ಜೀವನ ತೊರೆದು ಆಧ್ಯಾತ್ಮಿಕ ಅನ್ವೇಷಣೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗ ನೇಪಾಳದಲ್ಲಿ ವಾಸಿಸುತ್ತಿದ್ದಾರೆ. ಹಿಂದೂ ಧರ್ಮವನ್ನು ಪ್ರಚಾರ ಮಾಡುವುದರಲ್ಲಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಹಿಂದೂ ಸನ್ಯಾಸಿಗಳಲ್ಲಿ ಒಂದಾಗಿರುವ ಜುನಾ ಅಖಾರದ ಸದಸ್ಯರೂ ಇವರಾಗಿದ್ದಾರೆ.








