ಮಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮಂಗಳೂರು ಕೋಟೆಕಾರ್ ಸಹಕಾರಿ ಬ್ಯಾಂಕ್ ದರೋಡೆ (Kotekaru Bank Robbery Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಪೊಲೀಸರಿಗೆ ಸ್ಫೋಟಕ ಮಾಹಿತಿಗಳು ಸಿಕ್ಕಿವೆ.
ಈ ಬ್ಯಾಂಕ್ ದರೋಡೆಯಲ್ಲಿ ಸ್ಥಳೀಯರ ಸಹಕಾರ ಇರುವ ಮಾಹಿತಿ ಬೆಳಕಿಗೆ ಬಂದಿದೆ. ಬ್ಯಾಂಕ್‌ನಲ್ಲಿ 18 ಕೋಟಿ ರೂಪಾಯಿ ಮೌಲ್ಯದಷ್ಟು ಚಿನ್ನಾಭರಣ ಇರುವ ಬಗ್ಗೆ ಸ್ಥಳೀಯ ವ್ಯಕ್ತಿಯೇ ಈ ನಟೋರಿಯಸ್ ಗ್ಯಾಂಗ್‌ಗೆ ಖಚಿತ ಮಾಹಿತಿ ನೀಡಿದ್ದಾನೆ. ಬ್ಯಾಂಕ್‌ನ ಸುತ್ತಮುತ್ತ ಮುಸ್ಲಿಂರು ಹೆಚ್ಚಾಗಿರುವುದರಿಂದಾಗಿ ದರೋಡೆಗೆ ತೊಡಕಾಗಿತ್ತು. ಅದಕ್ಕಾಗಿಯೇ ಆತ ಶುಕ್ರವಾರ ಮಧ್ಯಾಹ್ನ ನಮಾಜ್ ಟೈಂ ಸೂಚಿಸಿದ್ದ ಎಂದು ಕೂಡ ತಿಳಿದು ಬಂದಿದೆ.
ಬ್ಯಾಂಕ್‌ನಲ್ಲಿ ಮೂವರು ಮಹಿಳಾ ಸಿಬ್ಬಂದಿ ಇರುವ ಕುರಿತು ಸ್ಥಳೀಯನೇ ಮಾಹಿತಿ ನೀಡಿದ್ದಾನೆ. ಅಲ್ಲದೇ ಬ್ಯಾಂಕ್ ದರೋಡೆಗೆ ಸಹಕಾರ ನೀಡುವ ಜೊತೆಗೆ ಪರಾರಿಯಾಗಲು ಸ್ಥಳೀಯರೇ ರೂಟ್‌ಮ್ಯಾಪ್ ಹಾಕಿಕೊಟ್ಟಿದ್ದಾರೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಗೊತ್ತಾಗಿದೆ.
ತನಿಖೆ ಚುರುಕುಗೊಳಿಸಿರುವ ಪೊಲೀಸರು ಸ್ಥಳೀಯ ಆಗಂತುಕನ ಬಂಧನಕ್ಕೆ ಬಲೆ ಬೀಸಿದ್ದಾರೆ. ಚಿನ್ನಕದ್ದ ದರೋಡೆಕೋರರು 700 ಕಿಮೀ ಕಾರಿನಲ್ಲೇ ಪ್ರಯಾಣಿಸಿದ್ದರು. ತಮಿಳುನಾಡಿನ ತಿರುನಲ್ವೇಲಿಗೆ ಫಿಯೇಟ್ ಕಾರಿನಲ್ಲಿ ಪ್ರಯಾಣ ಮಾಡಿದ್ದರು. ತಮಿಳುನಾಡು ತಲುಪಿದ ನಂತರ ಅಜ್ಞಾತ ಸ್ಥಳದಲ್ಲಿ ಕಾರು ಬಿಟ್ಟು ಚಿನ್ನದ ಜೊತೆ ಪರಾರಿಯಾಗಿದ್ದರು. ನಂತರ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.








