ಬೆಂಗಳೂರು: ಪ್ರಥಮ ಪಿಯುಸಿ ರಾಜಕೀಯ ಶಾಸ್ತ್ರ(ಪೊಲಿಟಿಕಲ್ ಸೈನ್ಸ್) ಸಿಲಬಸ್‍ನಲ್ಲಿ ನಾಗರಿಕ ಪೌರತ್ವ, ಸಮಾಜವಾದ ಹಾಗೂ ಗಣತಂತ್ರ ಪಠ್ಯವನ್ನು ಉದ್ದೇಶಪೂರ್ವಕವಾಗಿ ಕೇಂದ್ರದ ಮೋದಿ ಸರ್ಕಾರ ತೆಗೆದು ಹಾಕಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರದ ಬಿಜೆಪಿ ಸರ್ಕಾರ ಏನು ಮಾಡಲು ಹೊರಟಿದೆ. ಬಿಜೆಪಿ ದೇಶದ ಸಂವಿಧಾನದ ಮೌಲ್ಯಗಳು ಹಾಗೂ ತತ್ವಗಳ ಬಗ್ಗೆ ನಂಬಿಕೆಯೇ ಇಲ್ಲ ಎಂಬುದು ಇದರಿಂದ ಸ್ಪಷ್ಟವಾಗಿದೆ. ಪಠ್ಯದಲ್ಲಿ ಕೇಸರೀಕರಣ ಮಾಡಲು ಹೊರಟಿರುವ ಬಿಜೆಪಿ ಸರ್ಕಾರದ ನಿರ್ಧಾರವನ್ನು ಬಲವಾಗಿ ಖಂಡಿಸುತ್ತೇನೆ. ದೇಶದ ಜನತೆಗೆ ಬಿಜೆಪಿ ಉತ್ತರ ಕೊಡಬೇಕು ಎಂದು ಟ್ವಿಟರ್‍ನಲ್ಲಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಕೇಂದ್ರದ ನಿರ್ಧಾರದಿಂದಾಗಿ ಸಂವಿಧಾನದಲ್ಲಿನ ಪ್ರಮುಖ ಸ್ತಂಭಗಳ ಬಗ್ಗೆ ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ತಿಳಿಯದೇ ವಂಚಿತರಾಗುತ್ತಾರೆ. ಹೀಗಾಗಿ ಶಾಲಾ-ಕಾಲೇಜುಗಳ ಪಠ್ಯಗಳಲ್ಲಿ ಕೇಸರೀಕರಣ ಮಾಡುವುದನ್ನು ಬಿಜೆಪಿ ನಿಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ಮಾನವ ಸಂಪನ್ಮೂಲ ಇಲಾಖೆಯನ್ನು ಆಗ್ರಹಿಸಿದ್ದಾರೆ.








