ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಇತ್ತೀಚೆಗಷ್ಟೇ ರಿಲೀಸ್ ಆಗಿರುವ ನಟ ದರ್ಶನ್ ಮತ್ತು ಇತರರಿಗೆ ಮತ್ತೆ ಜಾಮೀನು ರದ್ದಾಗುವ ಆತಂಕ ಇದೆ. ಪೊಲೀಸರು ಹೈಕೋರ್ಟ್ ಜಾಮೀನು ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು,ಈ ಪ್ರಕರಣ ಸಂಬಂಧ ಈಗಾಗಲೇ ಸುಮಾರು 1,492 ಪುಟಗಳ ಮಹತ್ವದ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್ ಸಂಬಂಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಸ್ಟೇಷನ್ನಲ್ಲಿ ದಾಖಲಾಗಿದ್ದ ಎಫ್ಐಆರ್, ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ, ಆರೋಪಿಗಳ ಹಿನ್ನೆಲೆ ಮಾಹಿತಿ, ಪ್ರತ್ಯಕ್ಷದರ್ಶಿಗಳ ಹೇಳಿಕೆ, ಜಾಮೀನು ಅರ್ಜಿ ಮೊದಲಿಗೆ ವಜಾಗೊಂಡಿದ್ದ ದಾಖಲೆ, ದರ್ಶನ್ ಅವರ ಅನಾರೋಗ್ಯ ಸಂಬಂಧಿಸಿದಂತೆ ವೈದ್ಯರ ವರದಿ, ಮಧ್ಯಂತರ ಜಾಮೀನು ಸೇರಿದಂತೆ ಒಟ್ಟಾರೆ ಎಲ್ಲ ಮಹತ್ವದ ದಾಖಲೆಗಳನ್ನು ಪೊಲೀಸರು ಸುಪ್ರೀಂಕೋರ್ಟ್ ಮುಂದಿಟ್ಟಿದ್ದಾರೆ.
ಇಂದು ವಿಚಾರಣೆ ನಡೆಯಲಿದ್ದು. ದರ್ಶನ್, ಪವಿತ್ರಾ ಗೌಡ, ನಾಗರಾಜ್, ಲಕ್ಷ್ಮಣ್, ಅನು ಕುಮಾರ್, ಜಗದೀಶ್, ಪ್ರದೋಶ್ಗೆ ನೀಡಲಾಗಿದ್ದ ಜಾಮೀನು ಪ್ರಶ್ನಿಸಿ ಪೊಲೀಸರು ಅರ್ಜಿ ಸಲ್ಲಿಸಿದ್ದಾರೆ. ದ್ವಿಸದಸ್ಯ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬರಲಿದ್ದು, ಭಾರೀ ಕುತೂಹಲ ಕೆರಳಿಸಿದೆ.








