ಬೆಂಗಳೂರು : ಸಿಎಂ ಗೃಹ ಕಚೇರಿ ಕೃಷ್ಣಾ ಮತ್ತು ಕಾವೇರಿ ನಿವಾಸದಲ್ಲಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆ ಬಿ.ಎಸ್. ಯಡಿಯೂರಪ್ಪ ಅವರು ಹೋಂ ಕ್ವಾರಂಟೈನ್ ಗೆ ಒಳಪಟ್ಟಿದ್ದಾರೆ.
ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಟ್ವೀಟ್ ಮಾಡಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾ ಮತ್ತು ಕಾವೇರಿ ನಿವಾಸದಲ್ಲಿ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ. ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಈಗಾಲೇ ಬಿಬಿಎಂಪಿ ಸಿಬ್ಬಂದಿ ಸ್ಯಾನಿಟೈಸರ್ ಸಿಂಪಡಿಸಿದ್ದಾರೆ. ಕೆಲ ದಿನಗಳ ಕಾಲ ಮನೆಯಿಂದಲೇ ಸಿಎಂ ಕಾರ್ಯನಿರ್ವಹಿಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ಅಗತ್ಯ ಸಲಹೆಗಳನ್ನು ಪಾಲಿಸುತ್ತೇವೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಸಿಎಂ, ‘ಯಾರೂ ಆತಂಕ ಪಡುವ ಅಗತ್ಯವಿಲ್ಲ, ನಾನು ಆರೋಗ್ಯವಾಗಿ ಇದ್ದೇನೆ. ಎಲ್ಲರೂ ಕರೊನಾದಿಂದ ದೂರವಿರಲು ಮುನ್ನೆಚ್ಚರಿಕೆಯ ಕ್ರಮ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಜತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿ. ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ’ ಎಂದು ಮನವಿ ಮಾಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸ, ಧವಳಗಿರಿ ನಿವಾಸದಲ್ಲಿ ಒಟ್ಟು ಹತ್ತು ಮಂದಿಗೆ ಕೊರನಾ ಪಾಸಿಟಿವ್ ಬಂದಿದೆ.








