ಬೆಳಗಾವಿ : ಸಿದ್ದರಾಮಯ್ಯನವರು ಸೇರಿ ಉಳಿದ ಕಾಂಗ್ರೆಸ್ ಸ್ನೇಹಿತರಲ್ಲಿ ವಿನಂತಿ ಮಾಡುವೆ, ಈಗ ಟೀಕೆ ಮಾಡುವುದನ್ನ ಬಿಡಬೇಕು ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ.
ಆಶಾ ಕಾರ್ಯಕರ್ತರು ಸೇವೆ ನಿಲ್ಲಿಸುವ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿದ ಅವರು, ಆಶಾ ಕಾರ್ಯಕರ್ತರು ಸೇವೆ ನಿಲ್ಲಿಸಬೇಡಿ, ಪ್ರಧಾನಮಂತ್ರಿಗಳು ಆಶಾ ಕಾರ್ಯಕರ್ತರನ್ನು ಕೊರೊನಾ ವಾರಿಯರ್ಸ್ ಅಂತಾ ಹೇಳಿದ್ದಾರೆ. ಯುದ್ಧದ ಸಂದರ್ಭದಲ್ಲಿ ಯಾರು ಯುದ್ಧವನ್ನು ಬಿಟ್ಟು ಹೋಗಬಾರದು ಎಂದು ಮನವಿ ಮಾಡಿಕೊಂಡರು.
ಆಶಾ ಕಾರ್ಯಕರ್ತರು ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಅವರ ಸಮಸ್ಯೆ ಪರಿಹರಿಸಲು ಸಿಎಂ ಮತ್ತು ಪಿಎಂ ಅವರ ಗಮನಕ್ಕೆ ತರುವೆ ಎಂದು ಭರವಸೆ ನೀಡಿದ ಸುರೇಶ್ ಅಂಗಡಿ, ಕೊರೊನಾ ವಿರುದ್ಧ ಎಲ್ಲಾರು ಒಗ್ಗಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಕಾಂಗ್ರೆಸ್, ಬಿಜೆಪಿ ಅಂತಾ ಅಲ್ಲ ಎಲ್ಲರೂ ಕೆಲಸ ಮಾಡುತ್ತಿದ್ದೇವೆ ಎಂದರು.
ಇದೇ ವೇಳೆ ಸಿದ್ದರಾಮಯ್ಯ ಅವರ ಆರೋಪದ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ಟೀಕೆ ಮಾಡುವುದನ್ನ ಬಿಡಬೇಕು. ಸಿದ್ದರಾಮಯ್ಯನವರು ಸೇರಿ ಉಳಿದ ಕಾಂಗ್ರೆಸ್ ಸ್ನೇಹಿತರಲ್ಲಿ ವಿನಂತಿ ಮಾಡುವೆ, ಈಗ ಟೀಕೆ ಮಾಡುವುದನ್ನ ಬಿಡಬೇಕು. ಸಮಸ್ಯೆ ಇದ್ದಲ್ಲಿ ಪರಿಹಾರ ಮಾಡುವ ಕೆಲಸವನ್ನು ಮಾಡಲಿ. ಟೀಕೆ ಮಾಡಲು ವಿಧಾನಸೌಧ, ಸಂಸತ್ತು ಇದೆ. ಅವಾಗ ಬೇಕಾದ್ರೆ ಟೀಕೆ ಮಾಡಲಿ ಎಂದು ಮನವಿ ಮಾಡಿಕೊಂಡರು.