ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಖಾಸಗಿ ಆಸ್ಪತ್ರೆಯ ಅಜಾಗರೂಕತೆಯಿಂದ ಮಹಿಳೆಯೊಬ್ಬರು ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿ, ಸಾವು-ಬದುಕಿನ ನಡುವೆ ಹೋರಾಡಿದ ಘಟನೆ ಬೆಳಕಿಗೆ ಬಂದಿದೆ. ಹೆರಿಗೆ ಶಸ್ತ್ರ ಚಿಕಿತ್ಸೆಯ ವೇಳೆ ವೈದ್ಯರು ಸರ್ಜಿಕಲ್ ಬಟ್ಟೆಯ ಒಂದು ತುಣುಕು ಬಾಣಂತಿಯ ಹೊಟ್ಟೆಯೊಳಗೆ ಬಿಟ್ಟು ಬಿಟ್ಟಿದ್ದರು. ಈ ಅಜಾಗರೂಕತೆಯ ಪರಿಣಾಮವಾಗಿ ಮಹಿಳೆ ಉಸಿರಾಟದ ತೊಂದರೆ, ತೀವ್ರ ಜ್ವರ ಮತ್ತು ಸಂಧಿ ನೋವು ಅನುಭವಿಸುತ್ತಿದ್ದರು. ಕೊನೆಗೆ ಮಂಗಳೂರಿನ ನುರಿತ ವೈದ್ಯರ ತಪಾಸಣೆಯ ಮೂಲಕ ಈ ಸತ್ಯ ಹೊರಬಿದ್ದಿದೆ.
ಈಗಾಗಲೇ ಬಾಣಂತಿಯ ಪತಿ ಗಗನ್ ದೀಪ್ ಪೊಲೀಸ್ ದೂರು ನೀಡಿದ್ದಾರೆ. ಕುಟುಂಬದವರು ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸರ್ಜಿಕಲ್ ಬಟ್ಟೆ ಹೊಟ್ಟೆಯಲ್ಲಿ ಬಿಟ್ಟ ವೈದ್ಯ: ಪುತ್ತೂರಿನಲ್ಲಿ ಆಘಾತಕಾರಿ ಘಟನೆ!
2024ರ ನವೆಂಬರ್ 27ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ, ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಬಂಗಾರಡ್ಕದ ಶರಣ್ಯ ಲಕ್ಷ್ಮೀ ಎಂಬ ಮಹಿಳೆ ಹೆರಿಗೆಗಾಗಿ ದಾಖಲಾಗಿದ್ದರು. ವೈದ್ಯರು ಸಿಸೇರಿಯನ್ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಿ, ಡಿಸೆಂಬರ್ 2ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದರು. ಆದರೆ, ಡಿಸ್ಚಾರ್ಜ್ ಆದ ನಂತರ ಶರಣ್ಯ ಲಕ್ಷ್ಮೀ ವಿಪರೀತ ಜ್ವರದಿಂದ ಬಳಲತೊಡಗಿದರು.
ಈ ಬಗ್ಗೆ ಮಹಿಳೆಯ ಕುಟುಂಬದವರು ಹೆರಿಗೆ ಮಾಡಿಸಿದ ವೈದ್ಯ ಡಾ ಅನಿಲ್ ಬಳಿ ವಿಚಾರಿಸಿದ್ದಾಗ ಜ್ವರದ ಔಷಧಿ ನೀಡುವಂತೆ ವೈದ್ಯರು ಸೂಚಿಸಿದ್ದರು. ಮತ್ತೂ ಜ್ವರ ಕಡಿಮೆ ಆಗದಿದ್ದಾಗ ಮನೆಯವರು ಮತ್ತೆ ವೈದ್ಯರನ್ನು ಸಂಪರ್ಕಿಸಿದ್ದಾರೆ. ಈ ವೇಳೆ, ಹೆಮಟೋಮ್ ಆಗಿರಬಹುದು ಎಂದು ಹೇಳಿದ ವೈದ್ಯರು, ಹೆಚ್ಚು ಚಿಂತೆ ಪಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ್ದರು.
ಬಾಣಂತಿಯ ಜ್ವರ ಕಡಿಮೆಯೇ ಆಗದಿದ್ದ ಕಾರಣ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಆಗ ಮಹಿಳೆಯ ಹೊಟ್ಟೆಯಲ್ಲಿ ಹತ್ತು ಸೆಂಟಿಮೀಟರ್ ಮಾಫ್ ಫಾರ್ಮೇಶನ್ ಪತ್ತೆಯಾಯಿತು. ಬಳಿಕ ಬೇರೆ ಔಷಧಿ ನೀಡಿದ ನಂತರ ಜ್ವರ ಕಡಿಮೆಯಾಗಿತ್ತು. ಆದರೆ ನಂತರ ಸಂಧಿ ನೋವು ಕಾಣಿಸಿಕೊಂಡಿತು. ಇದಕ್ಕೆ ಆರ್ಥೋ ಸಂಬಂಧಿತ ತೊಂದರೆ ಇರಬಹುದು ಎಂದು ವೈದ್ಯರು ಹೇಳಿದರು.
ನುರಿತ ವೈದ್ಯರ ತಪಾಸಣೆಯ ಮೂಲಕ ಸತ್ಯ ಬಹಿರಂಗ
ಆರೋಗ್ಯ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ, ಕುಟುಂಬದವರು ಮಂಗಳೂರಿನ ಖ್ಯಾತ ವೈದ್ಯರನ್ನು ಸಂಪರ್ಕಿಸಿದರು. ಅಲ್ಲಿ ಸ್ಕ್ಯಾನಿಂಗ್ ವರದಿ ಪರಿಶೀಲಿಸಿದ ವೈದ್ಯರು, ಪುತ್ತೂರಿನ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವನ್ನು ಪತ್ತೆ ಹಚ್ಚಿದರು. ಬಳಿಕ ಸಿಟಿ ಸ್ಕ್ಯಾನ್ ಮಾಡಿಸಿದಾಗ, ಹೆರಿಗೆ ಶಸ್ತ್ರ ಚಿಕಿತ್ಸೆಯ ವೇಳೆ ಹೊಟ್ಟೆಯೊಳಗೆ ಸರ್ಜಿಕಲ್ ಬಟ್ಟೆ ಬಿಟ್ಟಿರುವುದು ಖಚಿತವಾಯಿತು.
ಕುಟುಂಬದವರು ತಕ್ಷಣ ಪುತ್ತೂರಿನ ಇನ್ನೊಂದು ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿ, ಸರ್ಜಿಕಲ್ ಬಟ್ಟೆಯ ಮುದ್ದೆಯನ್ನು ಹೊರತೆಗೆದಿದ್ದಾರೆ.
ವೈದ್ಯರ ವಿರುದ್ಧ ಪೊಲೀಸ್ ದೂರು
ಬಾಣಂತಿಯ ಪತಿ ಗಗನ್ ದೀಪ್ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಪತ್ನಿ ಮೂರು ತಿಂಗಳಿನಿಂದ ಭಾರೀ ಮಾನಸಿಕ ಮತ್ತು ದೈಹಿಕ ಯಾತನೆ ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಕುಟುಂಬದವರು ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.