ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದೆ. ನಿನ್ನೆ ಸಂಜೆ ಸುರಿದ ಮಳೆ ಬಿರುಗಾಳಿ, ಗುಡುಗಿಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ.
ಹಗಲು ಉರಿ ಬಿಸಿಲಿನಿಂದ ಕಂಗೆಟ್ಟ ಜನತೆಗೆ ಮಳೆಯಿಂದ ತಂಪು ಅನುಭವವಾದರೂ, ಅತಿಯಾದ ಗಾಳಿ ಮಳೆಯಿಂದ ಅನೇಕ ಸಮಸ್ಯೆಗಳು ಉಂಟಾಗಿವೆ. ದಕ್ಷಿಣ ಕನ್ನಡದ ಬೆಳ್ತಂಗಡಿ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳು ಉರುಳಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಹಲವು ಕಡೆ ವಾಹನ ಸವಾರರು ಪರದಾಡುವಂತಾಗಿದೆ. ಕೆಲ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಬುಧವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ತಯಾರಿ ಇಲ್ಲದೆ ಸಾಗುತ್ತಿದ್ದ ಜನರು, ವಾಹನ ಸವಾರರು ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ.
ವಾತಾವರಣ ಇಲಾಖೆಯ ಪ್ರಕಾರ ಮುಂದಿನ ದಿನಗಳಲ್ಲಿ ಸಹ ರಾಜ್ಯದ ಹಲವೆಡೆ ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಸಾರ್ವಜನಿಕರಿಗೆ ಸುರಕ್ಷಿತವಾಗಿ ಇರುವುದು ಹಾಗೂ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.