ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಅವರು 5 ವರ್ಷ ಪೂರೈಸಿದ ಹಿನ್ನಲೆಯಲ್ಲಿ, ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ವಿಶೇಷ ಔತಣ ಕೂಟವನ್ನು ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಕಾಂಗ್ರೆಸ್ ಮುಖಂಡರು, ಶಾಸಕರು ಮತ್ತು ವಿವಿಧ ಗಣ್ಯರು ಭಾಗವಹಿಸಿದ್ದಾರೆ.
ಆದರೆ, ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಇದ್ದದ್ದು ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ ಮತ್ತು ಹಾಲಿ ಶಾಸಕರಾದ ಹೆಬ್ಬಾರ್ ಅವರ ಹಾಜರಾತಿ. ಪ್ರಚಲಿತ ರಾಜಕೀಯ ಪರಿಸ್ಥಿತಿಯಲ್ಲಿ, ಇಬ್ಬರು ಬಿಜೆಪಿ ಶಾಸಕರು ಈ ಔತಣ ಕೂಟದಲ್ಲಿ ಭಾಗಿಯಾಗಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಎಸ್.ಟಿ. ಸೋಮಶೇಖರ್ ಮತ್ತು ಹೆಬ್ಬಾರ್ ಕಾಂಗ್ರೆಸ್ ಸರ್ಕಾರದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಅಂತ ಹೇಳಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಹಲವು ಪ್ರಮುಖ ವಿಚಾರಗಳಲ್ಲಿ ಬೆಂಬಲಿಸುತ್ತಿದ್ದ ಅವರು, ಈಗ ಡಿಕೆಶಿ ಅವರ ಔತಣ ಕೂಟಕ್ಕೆ ಹಾಜರಾಗಿರುವುದು ಈ ಸಂಬಂಧ ಮತ್ತಷ್ಟು ಬಲಪಡಿಸಿರುವಂತೆ ಕಾಣುತ್ತಿದೆ.
ರಾಜಕೀಯ ಲೆಕ್ಕಾಚಾರ ಏನಾಗಿದೆ?
ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಒಪ್ಪಂದ ಮಾಡಿಕೊಂಡ ಬಳಿಕ, ಹಲವರು ತಮ್ಮ ಭವಿಷ್ಯದ ಲೆಕ್ಕಾಚಾರ ಮಾಡುತ್ತಿದ್ದಾರೆ. ಈ ಪೈಕಿ, ಕಾಂಗ್ರೆಸ್ ನೇತೃತ್ವದ ಸರ್ಕಾರದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ಬಿಜೆಪಿ ಶಾಸಕರು ಮುಂದೇನು ತೀರ್ಮಾನ ಮಾಡಬಹುದು ಎಂಬುದರ ಬಗ್ಗೆ ಊಹಾಪೋಹಗಳು ನಡೆಯುತ್ತಿವೆ.
ಇದರಿಂದಾಗಿ, ಎಸ್.ಟಿ. ಸೋಮಶೇಖರ್ ಹಾಗೂ ಹೆಬ್ಬಾರ್ ಅವರ ಕಾಂಗ್ರೆಸ್ಗೆ ಸೇರ್ಪಡೆ ಸಾಧ್ಯವಿದೆಯೇ? ಅಥವಾ ಅವರು ಕೇವಲ ಸ್ನೇಹಭಾವದಿಂದ ಹಾಜರಾಗಿದ್ದಾರೆಯೇ? ಎಂಬುದರ ಬಗ್ಗೆ ಹಲವು ಚರ್ಚೆಗಳು ನಡೆಯುತ್ತಿವೆ.