ಕರ್ನಾಟಕ ಉಪ ಮುಖ್ಯಮಂತ್ರಿ ಹಾಗೂ KPCC ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಸೂಚನೆ ನೀಡಿದ್ದು, ಈ ಹೇಳಿಕೆ ರಾಜ್ಯದ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಪಕ್ಷದ ಸಭೆಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಾನು KPCC ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ, ಕಾಯಿರಿ ಎಂದು ಹೇಳಿಕೆ ನೀಡಿದ್ದಾರೆ. ಖರ್ಗೆ ಸಾಹೇಬ್ರು AICC ಅಧ್ಯಕ್ಷರು ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿದ್ದಾರೆ. ನಾನು KPCC ಅಧ್ಯಕ್ಷ ಮತ್ತು DCM (ಡಿಸಿಎಂ) ಎರಡೂ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಆದರೆ, 100 ಕಾಂಗ್ರೆಸ್ ಕಚೇರಿಗಳ ಶಂಕುಸ್ಥಾಪನೆಯ ಬಳಿಕ KPCC ಅಧ್ಯಕ್ಷ ಸ್ಥಾನದಿಂದ ಮುಕ್ತನಾಗುತ್ತೇನೆ. ಬೇರೆಯವರು ಈ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಹೇಳಿದ್ದಾರೆ.
ಡಿಕೆಶಿ ಅವರ ಈ ಹೇಳಿಕೆಯು ಅವರು KPCC ಅಧ್ಯಕ್ಷ ಸ್ಥಾನ ತೊರೆಯಲು ಒತ್ತಡವಿದೆಯಾ? ಎಂಬ ಚರ್ಚೆಗೆ ಕಾರಣವಾಗಿದೆ. ಇದು ಪಕ್ಷದ ಒಳಗಿನ ರಾಜಕೀಯಕ್ಕೆ ಸಂಬಂಧಿಸಿದ್ದೇ ಅಥವಾ ಅವರು ಸ್ವತಃ ರಾಜೀನಾಮೆ ನೀಡಲು ನಿರ್ಧರಿಸಿದ್ದಾರಾ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಾಗಿದೆ.
ಮುಂದಿನ KPCC ಅಧ್ಯಕ್ಷ ಯಾರು?
ಡಿಕೆಶಿ ಅವರ ಈ ಘೋಷಣೆಯ ನಂತರ, KPCC ನೂತನ ಅಧ್ಯಕ್ಷ ಸ್ಥಾನಕ್ಕಾಗಿ ಯಾರು ಮುಂದಾಗಬಹುದು? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹಾಲಿ ರಾಜ್ಯ ಸರ್ಕಾರದಲ್ಲಿ ಸಿದ್ದರಾಮಯ್ಯ – ಡಿಕೆಶಿ ನಡುವಿನ ರಾಜಕೀಯ ಸಮತೋಲನ ಕೂಡ ಈ ನಿರ್ಧಾರಕ್ಕೆ ಪ್ರಭಾವ ಬೀರುವ ಸಾಧ್ಯತೆ ಇದೆ.
ಇದು ಕೇವಲ ರಾಜಕೀಯ ತಂತ್ರವೋ ಅಥವಾ ಶೀಘ್ರದಲ್ಲೇ KPCCಗೆ ಹೊಸ ನಾಯಕನ ಆಯ್ಕೆ ನಡೆಯಲಿದೆಯೋ ಎಂಬುದು ಕುತೂಹಲ ಮೂಡಿಸಿದೆ.