ಭಾಷಾ ಹೇರಿಕೆಯ ವಿಷಯವಾಗಿ ನಟ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಮತ್ತು ಖ್ಯಾತ ಬಹುಭಾಷಾ ನಟ ಪ್ರಕಾಶ್ ರಾಜ್ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ವಾಕ್ಸಮರ ನಡೆದಿದ್ದು, ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಪ್ರಕಾಶ್ ರಾಜ್ ತಮ್ಮ X (ಹಳೆಯ Twitter) ಖಾತೆಯಲ್ಲಿ ಈ ಕುರಿತಾಗಿ ಕಿಡಿಕಾರಿದ್ದಾರೆ. ತಮ್ಮ ಪೋಸ್ಟ್ನಲ್ಲಿ ಅವರು, ನಿಮ್ಮ ಹಿಂದಿ ಭಾಷೆಯನ್ನು ನಮ್ಮ ಮೇಲೆ ಹೇರಬೇಡಿ. ಇದು ಇನ್ನೊಂದು ಭಾಷೆಯನ್ನು ದ್ವೇಷಿಸುವ ಬಗ್ಗೆ ಅಲ್ಲ; ನಮ್ಮ ಮಾತೃಭಾಷೆ ಮತ್ತು ಸಾಂಸ್ಕೃತಿಕ ಗುರುತನ್ನು ಸ್ವಾಭಿಮಾನದಿಂದ ರಕ್ಷಿಸುವ ಬಗ್ಗೆ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ, “ಯಾರಾದರೂ ದಯವಿಟ್ಟು ಇದನ್ನು ಪವನ್ ಕಲ್ಯಾಣ್ ಅವರಿಗೆ ವಿವರಿಸಿ ಎಂಬ ವ್ಯಂಗ್ಯವನ್ನೂ ಮಾಡಿದ್ದಾರೆ.
ವಿವಾದದ ಹಿಂದಿನ ಹಿನ್ನೆಲೆ
ಭಾರತದಲ್ಲಿ ಹಲವಾರು ಬಾರಿ ಭಾಷಾ ಹೇರಿಕೆಯ ಬಗ್ಗೆ ಚರ್ಚೆಗಳು ನಡೆದಿವೆ. ಹಿಂದಿ ಪ್ರಚಾರವನ್ನು ದಕ್ಷಿಣ ಭಾರತದ ಜನತೆ ವಿರೋಧಿಸುತ್ತಾರೆ ಎಂಬ ವಿಷಯ ಈ ವಿವಾದದಲ್ಲಿ ಮತ್ತೆ ಒತ್ತಿ ಹೇಳಲಾಗಿದೆ. ಪವನ್ ಕಲ್ಯಾಣ್ ಹಲವಾರು ಬಾರಿ ತಮಿಳು, ತೆಲುಗು, ಹಿಂದಿ ಸೇರಿ ಬಹುಭಾಷೆಗಳ ಪ್ರೋತ್ಸಾಹದ ಬಗ್ಗೆ ಮಾತನಾಡಿದ್ದಾರೆ. ಆದರೆ, ಪ್ರಕಾಶ್ ರಾಜ್ ಅವರ ಟೀಕೆ ಈ ವಿಚಾರದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯ ಭಿನ್ನತೆ
ಪ್ರಕಾಶ್ ರಾಜ್ ಅವರ ಈ ಹೇಳಿಕೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನಮ್ಮ ಪ್ರಾದೇಶಿಕ ಭಾಷೆಗಳಿಗೂ ಸಮಾನ ಪ್ರಾಧಿಕಾರ ಬೇಕು ಎಂದು ಪ್ರಕಾಶ್ ರಾಜ್ ಅವರ ಅಭಿಪ್ರಾಯವನ್ನು ಬೆಂಬಲಿಸುತ್ತಿದ್ದರೆ, ಇತರರು ಭಾರತದ ಸಂಘಟಿತ ಬಲವನ್ನು ಹಿಂದಿ ಒಗ್ಗೂಡಿಸಬಹುದು ಎಂದು ಪರಭಾಷಾ ಪ್ರಚಾರವನ್ನು ಒಪ್ಪಿಕೊಂಡಿದ್ದಾರೆ.