ಹನಿಟ್ರ್ಯಾಪ್ ಪ್ರಕರಣದ ಹಿಂದೆ ಯಾವ ಡೈರೆಕ್ಟರ್, ಪ್ರೊಡ್ಯೂಸರ್ ಇದ್ದಾರೆ ಎಂಬುದನ್ನು ತಿಳಿಯಬೇಕಾದರೆ, ಅದು ಸಿಬಿಐ ತನಿಖೆಗೆ ಒಳಪಡಬೇಕಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಯಾದಗಿರಿ ಜಿಲ್ಲೆಯ ಮಹಲ್ ರೋಜಾದಲ್ಲಿ ಮಾತನಾಡಿದ ಅವರು, ಹನಿಟ್ರ್ಯಾಪ್ ರಾಜ್ಯದಲ್ಲಿ ಒಂದು ಟ್ರೆಂಡ್ ಆಗಿದೆ. ಕೆಲವರು ಇದನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ಇದು ಬಹಳ ಗಂಭೀರವಾದ ವಿಚಾರ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯದಲ್ಲಿ ಜನರ ಪ್ರೀತಿಯನ್ನು ಗಳಿಸಿ, ದೊಡ್ಡ ಮಟ್ಟಕ್ಕೆ ಬೆಳೆದಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವರು ಹನಿಟ್ರ್ಯಾಪ್ ಮೂಲಕ ರಾಜಕೀಯ ನಾಯಕರ ಮೇಲೆ ದುರುದ್ದೇಶಪೂರಿತವಾಗಿ ದಾಳಿ ಮಾಡುತ್ತಿದ್ದಾರೆ. ಇದರಿಂದ ವ್ಯಕ್ತಿಗಳ ಮಾನಸಿಕ ಶಾಂತಿ ಹಾಳಾಗುತ್ತಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಹನಿಟ್ರ್ಯಾಪ್ ಪ್ರಕರಣಗಳ ಹಿಂದೆ ಯಾರು ಇದ್ದಾರೆ, ಇದನ್ನು ನಿರ್ವಹಿಸುವ ವ್ಯಕ್ತಿಗಳು ಯಾರು ಎಂಬುದನ್ನು ಗೊತ್ತಾಗಿಸಲು ಸಿಬಿಐ ತನಿಖೆ ಅನಿವಾರ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.
ಇತ್ತೀಚೆಗೆ ರಾಜ್ಯದಲ್ಲಿ ಹನಿಟ್ರ್ಯಾಪ್ ಸಂಬಂಧಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ವಲಯದಲ್ಲಿ ಈ ವಿಚಾರವು ತೀವ್ರ ಚರ್ಚೆಗೆ ಗ್ರಾಸವಾಗಿದೆ.








