ಒಂದೆಡೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಿಜೆಪಿ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದು, ಮತ್ತೊಂದೆಡೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವೇಳೆ ಅವರು ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಹೆಚ್ಚಳವನ್ನು ತೀವ್ರವಾಗಿ ಖಂಡಿಸಿದರು.
ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರೆಸ್ನ ತೀವ್ರ ಪ್ರತಿಭಟನೆ
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಾಂಗ್ರೆಸ್ ನ ಮುಖಂಡರು ದರ ಏರಿಕೆಗೆ ಕೇಂದ್ರ ಸರ್ಕಾರದ ನೀತಿಯೇ ಕಾರಣ ಎಂದು ಆಕ್ಷೇಪಿಸಿದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಣದೀಪ್ ಸುರ್ಜೇವಾಲ, ಸಚಿವ ಜಮೀರ್ ಅಹ್ಮದ್ ಖಾನ್ ಸೇರಿ ಹಲವಾರು ಹಿರಿಯ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.
“ಜನರಿಗೆ ಆಕ್ರೋಶ ಇಲ್ಲ, ಬಿಜೆಪಿಗೆ ಮಾತ್ರ ಇದೆ,” ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದರು. ಪ್ರತಿಭಟನೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡು ಶಕ್ತಿ ಪ್ರದರ್ಶನ ನಡೆಸಿದರು. ಶಾಸಕರು, ಮಹಿಳಾ ಮುಖಂಡರು ಕೂಡಾ ಭಾಗಿಯಾಗಿದ್ದರು.
ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಾತನಾಡುತ್ತಾ, “ಡಾ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅಡುಗೆ ಗ್ಯಾಸು ಸಿಲಿಂಡರ್ ಬೆಲೆ 413 ರೂ ಇತ್ತು. ಈಗ ಅದು 850 ರೂ ಆಗಿದೆ. ಇದು ಜನರ ಮೇಲೆ ಅಟ್ಟಹಾಸವಾಗಿದೆ,” ಎಂದರು.
ಬಾಗಲಕೋಟೆಯಲ್ಲಿ ಬಿಜೆಪಿ ‘ಜನಾಕ್ರೋಶ ಯಾತ್ರೆ’
ಇತ್ತ ಬಾಗಲಕೋಟೆಯಲ್ಲಿ ಬಿಜೆಪಿ ‘ಜನಾಕ್ರೋಶ ಯಾತ್ರೆ’ ನಡೆಸಿತು. ಏಪ್ರಿಲ್ 7 ರಂದು ಮೈಸೂರು ನಗರದಿಂದ ಆರಂಭಗೊಂಡ ಯಾತ್ರೆ ಇಂದಿಗೆ ಬಾಗಲಕೋಟೆ ತಲುಪಿದ್ದು, ತೆರೆದ ವಾಹನಗಳಲ್ಲಿ ಜಿಲ್ಲೆ ಜಿಲ್ಲೆಗಳ ಮೂಲಕ ಸಾಗುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ ಕೇಂದ್ರ ಯೋಜನೆಗಳ ಲಾಭಗಳು ತಲುಪುತ್ತಿಲ್ಲ ಎಂಬ ಆರೋಪವನ್ನು ವಿರೋಧಿಸುವುದರ ಜೊತೆಗೆ ರಾಜ್ಯ ಸರ್ಕಾರದ ನಿರ್ಧಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಲಾರಿ ಮಾಲೀಕರ ಮುಷ್ಕರ: ಬಡ ಜನರ ಮೇಲೂ ಪರಿಣಾಮ
ಡೀಸೆಲ್ ಬೆಲೆ ಏರಿಕೆಗೆ ವಿರೋಧವಾಗಿ ಲಾರಿ ಮಾಲೀಕರು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದು, ಮೂರನೇ ದಿನಕ್ಕೂ ಮುಂದುವರೆದಿದೆ. ಬೆಂಗಳೂರಿನ ಪ್ರಮುಖ ಮಾರ್ಕೆಟ್ಗಳಲ್ಲಿ ಸರಕು ಸಾಗಣೆ ಬಂದ್ ಆಗಿದ್ದು, ಆಹಾರ ಧಾನ್ಯ ಸೇರಿದಂತೆ ಹಲವು ಅಗತ್ಯ ವಸ್ತುಗಳ ದಾಸ್ತಾನಿಗೆ ಇದರಿಂದ ತೊಂದರೆ ಉಂಟಾಗಿದೆ. ಶೇಕಡಾ 80ರಷ್ಟು ಲಾರಿಗಳು ರಸ್ತೆಗೆ ಇಳಿಯದೇ ಉಳಿದಿದ್ದು, ಸರಬರಾಜಿನಲ್ಲಿ ಭಾರೀ ಅಡಚಣೆ ಉಂಟಾಗಿದೆ.
ಇಂಧನ ಮತ್ತು ಇತರೆ ವಸ್ತುಗಳ ದರ ಏರಿಕೆ ಸರ್ಕಾರದ ನೀತಿ ವಿರುದ್ಧ ವ್ಯಾಪಕ ಆಕ್ರೋಶವನ್ನು ಹುಟ್ಟಿಸುತ್ತಿದ್ದು, ರಾಜಕೀಯ ಪಕ್ಷಗಳ ವಿರೋಧಾತ್ಮಕ ಚಟುವಟಿಕೆಗಳು ಇನ್ನು ಮುಂದುವರಿಯುವ ಸಾಧ್ಯತೆ ಇದೆ. ಜನ ಸಾಮಾನ್ಯರ ಬದುಕಿಗೆ ನೇರ ಪರಿಣಾಮ ಬೀರುತ್ತಿರುವ ಈ ಬೆಲೆ ಏರಿಕೆ ಕುರಿತು ಯಾವ ಪಕ್ಷವೂ ಸ್ಪಷ್ಟವಾದ ಪರಿಹಾರ ಸೂಚಿಸದೆ, ಪರಸ್ಪರ ಆರೋಪ-ಪ್ರತ್ಯಾರೋಪಗಳಲ್ಲಿಯೇ ನಿರತರಾಗಿವೆ.








