ಜಾತಿ ಜನಗಣತಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸುತ್ತಿರುವ ಈ ಪ್ರಕ್ರಿಯೆ ಸಂಪೂರ್ಣವಾಗಿ ಸಮಾಜವನ್ನು ವಿಭಜಿಸುವ ಪಿತೂರಿಯಾಗಿದೆ ಎಂದು ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮನೆ-ಮನೆಗೆ ತೆರಳಿ ಪ್ರಾಮಾಣಿಕವಾಗಿ ದತ್ತಾಂಶ ಸಂಗ್ರಹಿಸದೇ ಸರ್ಕಾರ ತಾನು ಇಚ್ಛಿಸಿದ ರೀತಿಯಲ್ಲಿ ಜಾತಿ ಗಣತಿ ನಡೆಸಿದೆ. ಇದು ಜನಗಣತಿಯಲ್ಲ, ಕಾಂಗ್ರೆಸ್‌ನ ತುಷ್ಟೀಕರಣ ರಾಜಕೀಯದ ಸಾಧನವಾಗಿದೆ,” ಎಂದು ಆರೋಪಿಸಿದರು.
ಲಿಂಗಾಯತ ಸಮುದಾಯದ ಅಸ್ತಿತ್ವಕ್ಕೆ ಬೆದರಿಕೆ
ಬೆಲ್ಲದ್ ಅವರು ಸರ್ಕಾರದ ವರದಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, “66.35 ಲಕ್ಷ ಲಿಂಗಾಯತರು ಮತ್ತು 10.49 ಲಕ್ಷ ವೀರಶೈವ ಲಿಂಗಾಯತರನ್ನು ಬೇರ್ಪಡಿಸಿ, ಬಣಜಿಗ, ಗಾಣಿಗ, ಸಾದರ, ಉಪ್ಪಾರ, ಒಕ್ಕಲಿಗ, ಜಂಗಮ ಮುಂತಾದ ಉಪಪಂಗಡಗಳಾಗಿ ವಿಭಜಿಸುವ ಮೂಲಕ ಲಿಂಗಾಯತ ಸಮುದಾಯದ ಅಸ್ತಿತ್ವವನ್ನೇ ದುರ್ಬಲಗೊಳಿಸುವ ಹುನ್ನಾರ ನಡೆಯುತ್ತಿದೆ,” ಎಂದು ದೂರಿದರು.
ಎಲ್ಲಾ ಸಮುದಾಯಗಳಿಗೆ ಎಚ್ಚರಿಕೆಯ ಗಂಟೆ
“ಇದು ಎಲ್ಲಾ ಸಮುದಾಯಗಳಿಗೂ ಎಚ್ಚರಿಕೆಯ ಗಂಟೆಯಾಗಬೇಕು. ಸರ್ಕಾರದ ಈ ನಡೆ ಸಮಾಜದಲ್ಲಿ ವಿಭಜನೆ ಮತ್ತು ಭ್ರಾಂತಿಯ ಬೀಜ ಬಿತ್ತುವಂತಹದ್ದು,” ಎಂದು ಬೆಲ್ಲದ್ ಆರೋಪಿಸಿದರು.








