ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದಲ್ಲಿ 2021ರ ಮಾರ್ಚ್ 10ರಂದು ಸಂಭವಿಸಿದ್ದ ದುರ್ಘಟನೆಗೆ ಸಂಬಂಧಪಟ್ಟಂತೆ ಮಹತ್ವದ ತೀರ್ಪು ಹೊರಬಿದ್ದಿದೆ. ಗಂಗಾವತಿ ಹಿರಿಯ ಸಿವಿಲ್ ನ್ಯಾಯಾಲಯವು 12 ವರ್ಷದ ಅಪ್ರಾಪ್ತನಿಗೆ ಆಟೋ ಚಾಲನೆಗೆ ನೀಡಿದ್ದ ಮಾಲೀಕನ ವಿರುದ್ಧ ತೀರ್ಪು ನೀಡಿದ್ದು, ಮೃತ ವ್ಯಕ್ತಿಯ ಕುಟುಂಬಕ್ಕೆ 1,41,61,580 ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಈ ಪ್ರಕರಣದಲ್ಲಿ, ಆಟೋ ಮಾಲೀಕನೊಬ್ಬ ತನ್ನ ಆಟೋವನ್ನು 12 ವರ್ಷದ ಬಾಲಕನಿಗೆ ಚಾಲನೆಗೆ ನೀಡಿದಿದ್ದು, ಬಾಲಕ ಆಟೋ ಓಡಿಸುತ್ತಿದ್ದ ವೇಳೆ ಯಲಬುರ್ಗಾ ಪಟ್ಟಣದ ಅಂಗಡಿಯೊಂದರ ಬಳಿ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ರಾಜಶೇಖರ ಪಾಟೀಲ್ ಎಂಬ ವ್ಯಕ್ತಿಗೆ ಡಿಕ್ಕಿ ಹೊಡೆದಿದ್ದ. ಈ ಅಪಘಾತದಲ್ಲಿ ರಾಜಶೇಖರ ಪಾಟೀಲ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಅವರು ಕೊಪ್ಪಳದ ಯಲಬುರ್ಗಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಗಂಗಾವತಿ ನಿವಾಸಿಯಾಗಿದ್ದರು.
ಈ ಕುರಿತು ಪ್ರಕರಣವನ್ನು ಗಮನಿಸಿದ ನ್ಯಾಯಾಧೀಶ ರಮೇಶ ಎಸ್. ಗಾಣಿಗೇರ ಅವರು, ಆಟೋ ಮಾಲೀಕನ ಬದ್ಧತೆಯ ಕೊರತೆ ಹಾಗೂ ನಿರ್ಲಕ್ಷ್ಯದ ಮೇಲೆ ತೀರ್ಪು ನೀಡಿದ್ದಾರೆ. ಅಪ್ರಾಪ್ತರಿಗೆ ವಾಹನ ಹಸ್ತಾಂತರಿಸುವ ಮೊದಲು ಮಾಲೀಕರು ಹೆಚ್ಚು ಎಚ್ಚರಿಕೆ ವಹಿಸಬೇಕು. ಇದೊಂದು ಭಾರಿ ನಿರ್ಲಕ್ಷ್ಯ ಹಾಗೂ ಕಾನೂನು ಉಲ್ಲಂಘನೆ, ಎಂದು ಅವರು ತೀರ್ಪಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಅದಕ್ಕೂ ಹೆಚ್ಚಾಗಿ, ತೀರ್ಪಿನಲ್ಲಿ ಈ ದಂಡ ಮೊತ್ತವನ್ನು ಸಂಪೂರ್ಣವಾಗಿ ರಾಜಶೇಖರ ಪಾಟೀಲ್ ಅವರ ಕುಟುಂಬಕ್ಕೆ ಪರಿಹಾರವಾಗಿ ನೀಡಬೇಕೆಂದು ಸೂಚನೆ ನೀಡಲಾಗಿದೆ. ಈ ತೀರ್ಪು ಕೇವಲ ಈ ಕುಟುಂಬಕ್ಕೆ ನ್ಯಾಯ ಒದಗಿಸುವುದಲ್ಲದೇ, ಸಮಾಜದ ಇತರರಿಗೆ ಬೋಧನೆಯಾಗಿ ನಿಲ್ಲಲಿದೆ. ಅಪ್ರಾಪ್ತರ ಕೈಗೆ ವಾಹನ ನೀಡುವ ಮೊದಲು ಎಷ್ಟೊಂದು ಮುನ್ನೆಚ್ಚರಿಕೆ ಅಗತ್ಯ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಸಾಬೀತುಪಡಿಸಿದೆ.








