ಮುತ್ತಪ್ಪ ರೈ ಅವರ ಕಿರಿಯ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿರುವ ರಿಕ್ಕಿ ರೈನ ಮಾಜಿ ಗನ್ ಮ್ಯಾನ್ ವಿಠಲನ ಶಾಕಿಂಗ್ ಹೇಳಿಕೆ ಇಡೀ ಪ್ರಕರಣವನ್ನು ಹೊಸ ದಿಕ್ಕಿಗೆ ಕರೆದುಕೊಂಡು ಹೋಗುವ ಸಾಧ್ಯತೆ ಇದೆ. ಬಿಡದಿ ಪೊಲೀಸ್ ಠಾಣೆಯ ಪೊಲೀಸರು ವಿಠಲನನ್ನು ಕೋರ್ಟ್ ಎದುರು ಹಾಜರುಪಡಿಸಿದ್ದು, ಮುಂದಿನ 10 ದಿನಗಳ ಕಾಲ ಪೊಲೀಸರ ಕಸ್ಟಡಿಗೆ ನೀಡಲಾಗಿದೆ.
ವಿಚಾರಣೆ ಸಂದರ್ಭದಲ್ಲಿ, ರಿಕ್ಕಿ ರೈ ಅವರು , ತಮ್ಮ ಮೇಲೆ ತಾವೇ ಗುಂಡು ಹಾರಿಸಿದ್ದಾರೆ ಎಂಬ ಹೇಳಿಕೆಯನ್ನು ವಿಠಲ ನೀಡಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
ಬಿಡದಿ ಪೊಲೀಸರು ಈಗ ಈ ಪ್ರಕರಣದಲ್ಲಿ ಮತ್ತಷ್ಟು ಆಳವಾಗಿ ತನಿಖೆ ಆರಂಭಿಸಿದ್ದು, ದಾಳಿಯ ಹಿಂದಿನ ನಿಜಾಸತ್ಯವನ್ನು ಪತ್ತೆಹಚ್ಚಲು ವಿಠಲನಿಂದ ಇನ್ನಷ್ಟು ಮಾಹಿತಿ ಕಲೆ ಹಾಕುತ್ತಿದ್ದಾರೆ. ರಿಕ್ಕಿ ರೈಗೆ ಬಂದಿದ್ದ ಬೆದರಿಕೆಗಳು, ಅವರ ವೈಯಕ್ತಿಕ ಹಾಗೂ ವ್ಯವಹಾರಿಕ ಸಂಬಂಧಗಳನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.
ದಾಳಿಯ ನಂತರ ಆಸ್ಪತ್ರೆಗೆ ದಾಖಲಾದ ರಿಕ್ಕಿ ರೈ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ. ಆದರೆ ಇದೀಗ ಈ ಹೇಳಿಕೆಯಿಂದ ಅವರ ಮೇಲೆ ನಡೆದ ದಾಳಿ ನಿಜವಾಗಿಯೂ ಪರಸ್ಪರ ದ್ವೇಷದಿಂದ ಆಗಿದೆಯೇ ಅಥವಾ ಅದು ತಾವೇ ರಚಿಸಿದ ಡ್ರಾಮಾನೋ ಎಂಬುದರ ಬಗ್ಗೆ ಸಾರ್ವಜನಿಕ ವಲಯದಲ್ಲಿಯೇ ಚರ್ಚೆ ಆರಂಭವಾಗಿದೆ.
ಈಗ ವಿಠಲನ 10 ದಿನಗಳ ಪೊಲೀಸ್ ಕಸ್ಟಡಿ ಸಮಯದಲ್ಲಿ, ಪ್ರಕರಣದ ಎಲ್ಲ ಅಂಶಗಳನ್ನು ತಿಳಿದುಕೊಳ್ಳಲು ಅಧಿಕಾರಿಗಳು ಬದ್ಧರಾಗಿದ್ದಾರೆ. ಸಾರ್ವಜನಿಕರು ಈ ತನಿಖೆಯಿಂದ ಸತ್ಯ ಬಯಲಾಗುವುದೆಂಬ ನಿರೀಕ್ಷೆಯಲ್ಲಿದ್ದಾರೆ.








