ಸುಮಾರು ಎರಡು ದಶಕಗಳ ಹಿಂದೆ ಟಿವಿ ಮತ್ತು ಸುದ್ದಿಪತ್ರಿಕೆಗಳ ಮೂಲಕ ಮಾತ್ರ ಜನರಿಗೆ ತಲುಪುತ್ತಿದ್ದ ಸುದ್ದಿಗಳು, ಇಂದು ಡಿಜಿಟಲ್ ಯುಗದಲ್ಲಿ ಮೊಬೈಲ್‌ನಲ್ಲಿ ತಕ್ಷಣ ತಲುಪುವಂತಾಗಿದೆ. ಜಗತ್ತಿನ ಡಿಜಿಟಲೀಕರಣದ ಜೊತೆಗೆ ಮಾಧ್ಯಮ ಕ್ಷೇತ್ರವೂ ಆಧುನಿಕ ರೂಪ ತಾಳಿದ್ದು, ಇದೀಗ ಕರ್ನಾಟಕ ಸರ್ಕಾರ ಕೂಡ ಡಿಜಿಟಲ್ ಪತ್ರಿಕೋದ್ಯಮಕ್ಕೆ ಅಧಿಕೃತವಾಗಿ ಪ್ರಾಮುಖ್ಯತೆ ನೀಡಲು ಮುಂದಾಗಿದೆ ಎನ್ನುವುದು ಶ್ಲಾಘನೀಯ ಬೆಳವಣಿಗೆ.
KSDMF ಹೋರಾಟಕ್ಕೆ ಜಯದ ಸ್ಪರ್ಶ
ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೆ ಜಾಹೀರಾತು ನೀಡಲು ಹೊಸ ನೀತಿ ರೂಪಿಸುವ ಹಾಗೂ ಸರ್ಕಾರದಿಂದ ಮಾನ್ಯತೆ ನೀಡುವ ವಿಚಾರದಲ್ಲಿ ಕರ್ನಾಟಕ ಸ್ಟೇಟ್ ಡಿಜಿಟಲ್ ಮೀಡಿಯಾ ಫೋರಂ (KSDMF) ಮೊದಲಿನಿಂದಲೂ ಸತತ ಹೋರಾಟ ನಡೆಸುತ್ತಾ ಬಂದಿತ್ತು. ಇದೀಗ ಈ ಹೋರಾಟ ಫಲ ನೀಡಿದ್ದು, ಡಿಜಿಟಲ್ ಪತ್ರಿಕೋದ್ಯಮದ ಪ್ರಾಮುಖ್ಯತೆಯನ್ನು ಮೆರೆದಿದೆ.
ಅಭಿನಂದನಾ ಸಮಾರಂಭದ ಸಜ್ಜು
ಈ ಯಶಸ್ಸಿನ ಹಿನ್ನಲೆಯಲ್ಲಿ ಇಂದು ಮಂಗಳವಾರ (ಏಪ್ರಿಲ್ 29) ಬೆಳಗ್ಗೆ 10:30ಕ್ಕೆ ಬೆಂಗಳೂರು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ, KSDMF ವತಿಯಿಂದ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ. ಪ್ರಭಾಕರ್ ರವರಿಗೆ ಹಾಗೂ ವಾರ್ತಾ ಇಲಾಖೆಯ ಆಯುಕ್ತ ಹೇಮಂತ್ ನಿಂಬಾಳ್ಳರ್ ರವರಿಗೆ ವಿಶೇಷ ಅಭಿನಂದನಾ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಡಿಜಿಟಲ್ ಮಾಧ್ಯಮ ಕಾರ್ಯಕರ್ತರ ಭರವಸೆಯ ಕ್ಷಣ
ಈ ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಡಿಜಿಟಲ್ ಮಾಧ್ಯಮ ಸಂಸ್ಥೆಗಳ ಸಂಪಾದಕರು, ಪತ್ರಕರ್ತರು ಹಾಗೂ ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ. ಡಿಜಿಟಲ್ ಪತ್ರಿಕೋದ್ಯಮಕ್ಕೆ ದೊರೆತ ಈ ಹೊಸ ಸಾಂಸ್ಥಿಕ ಮಾನ್ಯತೆ, ಮಾಧ್ಯಮ ಕ್ಷೇತ್ರದ ಭವಿಷ್ಯಕ್ಕೆ ಮತ್ತಷ್ಟು ಬಲ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಭದ್ರ ಉಜ್ವಲ ಭವಿಷ್ಯದ ದಡಕ್ಕೆ ಡಿಜಿಟಲ್ ಮಾಧ್ಯಮ
ಈ ನಿರ್ಧಾರದಿಂದ ರಾಜ್ಯದ ಡಿಜಿಟಲ್ ಮಾಧ್ಯಮ ಕ್ಷೇತ್ರಕ್ಕೆ ಹೊಸ ದಿಕ್ಕು, ಹೊಸ ಉತ್ತೇಜನೆ ಸಿಗಲಿದೆ. ಸರ್ಕಾರದ ಮಾನ್ಯತೆ ಹಾಗೂ ಜಾಹಿರಾತು ನೀತಿಯ ರೂಪ ರಚನೆಯಿಂದ, ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೆ ಆರ್ಥಿಕ ಬಲ ಸಿಗಲಿದ್ದು, ನಿಷ್ಠೆಯೊಂದಿಗಿನ ಜವಾಬ್ದಾರಿಯುತ ಪತ್ರಿಕೋದ್ಯಮಕ್ಕೆ ದಾರಿ ತೆರೆಯಲಿದೆ.








