ಬೆಂಗಳೂರಿನಲ್ಲಿ ರಸ್ತೆ ನಿಯಮ ಉಲ್ಲಂಘನೆ ಮಾಡಿದ ವಾಹನಗಳನ್ನು ಮತ್ತೆ ಟೋಯಿಂಗ್ ಮಾಡುವ ಪ್ರಕ್ರಿಯೆ ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಕ್ರಮದ ಬಗ್ಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರದ ಈ ನಿರ್ಧಾರವನ್ನೂ ವಸೂಲಿ ಆಧಾರಿತವೆಂದು ಕರೆದಿದ್ದಾರೆ.
2022ರಲ್ಲಿ ಈ ಟೋಯಿಂಗ್ ವ್ಯವಸ್ಥೆಯನ್ನು ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ರಸ್ತೆ ಬದಿಯಲ್ಲೇ ಹತ್ತು ನಿಮಿಷದ ಕೆಲಸಕ್ಕೆ ಕಾರ್ ಪಾರ್ಕ್ ಮಾಡಿದರೂ ಟ್ರಾಫಿಕ್ ಪೊಲೀಸರ ಟೋಯಿಂಗ್ ವಾಹನ ಬಂದು ಕಾರ್ ಎಳೆದೊಯ್ಯುತ್ತಿದ್ದ ಕಥೆಗಳು ನಗರದಲ್ಲಿ ಸಾಮಾನ್ಯವಾಗಿದ್ದವು. ಇದರಿಂದ ಸಾರ್ವಜನಿಕರಲ್ಲಿ ಅಸಹನೆ ಹುಟ್ಟಿದ್ದ ಹಿನ್ನೆಲೆಯಲ್ಲಿ ಟೋಯಿಂಗ್ ನಿಷೇಧಕ್ಕೆ ಸರ್ಕಾರ ಕೈಹಾಕಿತ್ತು.
ಆದರೆ ಈಗ ಮತ್ತೆ ಟೋಯಿಂಗ್ ಮರುಪ್ರಾರಂಭಕ್ಕೆ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ, ಬೆಂಗಳೂರು ನಿವಾಸಿಗಳಿಗೆ ಕಿರಿಕಿರಿ ಮಾಡುತ್ತಿದ್ದ ಟೋಯಿಂಗ್ ವ್ಯವಸ್ಥೆಯನ್ನು 2022ರಲ್ಲಿ ಜನಾಕ್ರೋಶದ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಬೇಕಾಗಿತ್ತು. ಈಗ ಅದನ್ನ ಮತ್ತೆ ತರುವುದರ ಹಿಂದಿರುವ ಉದ್ದೇಶ ವಸೂಲಿ ಮಾಡುವುದು ಎಂಬುದು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ನಿರ್ಧಾರದಲ್ಲಿ ಸಾರ್ವಜನಿಕರ ಅನುಕೂಲವೋ ಅಥವಾ ಕಾನೂನು ಪಾಲನೆಯೋ ಎಂಬ ಗಂಭೀರ ಚರ್ಚೆಗಳು ನಡೆಯುತ್ತಿದ್ದು, ಸರ್ಕಾರದ ಈ ನಡೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಹಲವಾರು ಯುವಕರು, ಉದ್ಯೋಗಿಗಳು, ಸಣ್ಣ ವ್ಯಾಪಾರಸ್ಥರು ತಮ್ಮ ದಿನನಿತ್ಯದ ದುಡಿಮೆಗಾಗಿ ರಸ್ತೆಯಲ್ಲಿ ಗಾಡಿ ನಿಲ್ಲಿಸುತ್ತಿರುವ ಸಂದರ್ಭದಲ್ಲಿ ಈ ಟೋಯಿಂಗ್ ಕಾನೂನು ಅವರುಗಳಿಗೆ ಹೆಚ್ಚು ತೊಂದರೆ ನೀಡಬಹುದು ಎಂಬ ಅಭಿಪ್ರಾಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿವೆ.
ಇದಕ್ಕೂ ಮುನ್ನ ಹಲವಾರು ಬಾರಿ ಟೋಯಿಂಗ್ ವಾಹನಗಳು ನಿಯಮ ಬಿಟ್ಟು ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಕೆಲವೊಮ್ಮೆ ಚಾಲಕರ ಹಾಜರಿಯಲ್ಲೇ ಕಾರುಗಳನ್ನು ಎಳೆದೊಯ್ಯುವ, ಪಾರ್ಕಿಂಗ್ ಬಿಲ್ಲುಗಳ ಹೊರತಾಗಿಯೂ ಹೆಚ್ಚುವರಿ ಹಣ ವಸೂಲಿ ಮಾಡುವ ಘಟನೆಗಳೂ ನಡೆದಿದ್ದವು.








