ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯ ‘ಆಪರೇಷನ್ ಸಿಂಧೂರ್’ ಯಶಸ್ವಿಯಾಗಿ ನಡೆದ ಬೆನ್ನಲ್ಲೇ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗಂಭೀರ ಎಚ್ಚರಿಕೆಯನ್ನು ನೀಡಿದ್ದಾರೆ. ಆಪರೇಷನ್ ಸಿಂಧೂರ್ ಪಾಕಿಸ್ತಾನಕ್ಕೆ ಕೇವಲ ಎಚ್ಚರಿಕೆ ಮಾತ್ರ. ಅವರಿಂದ ಇನ್ನೊಮ್ಮೆ ತಪ್ಪಾದರೆ, ಈ ಬಾರಿ ನಮ್ಮ ಪ್ರತಿಕ್ರಿಯೆ ತೀವ್ರವಾಗಿರುತ್ತದೆ, ಸಹಿಸಲು ಸಾಧ್ಯವಾಗದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಗೋವಾ ಕರಾವಳಿಯಲ್ಲಿರುವ ಭಾರತೀಯ ನೌಕಾಪಡೆಯ ಸಜ್ಜುಗೊಂಡ ‘INS ವಿಕ್ರಾಂತ್’ ನ್ನು ಭೇಟಿ ಮಾಡಿದ ನಂತರ ಅವರು ಈ ಹೇಳಿಕೆ ನೀಡಿದರು. ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ. ನಾವು ತಾತ್ಕಾಲಿಕ ವಿರಾಮ ನೀಡಿದ್ದೇವೆ ಅಷ್ಟೆ. ಅಗತ್ಯವಿದ್ದರೆ ಮತ್ತೊಮ್ಮೆ ಕಾರ್ಯಾಚರಣೆಗೆ ಮುಂದಾಗಲು ಸಿದ್ಧವಿದ್ದೇವೆ. ಭಾರತ ಯಾವ ಮಟ್ಟದ ಪ್ರತಿಕ್ರಿಯೆ ನೀಡಬಲ್ಲದು ಎಂಬುದು ಈಗ ಪಾಕಿಸ್ತಾನಕ್ಕೆ ಚೆನ್ನಾಗಿ ಅರ್ಥವಾಗಿದೆ, ಎಂದು ಹೇಳಿದರು
ರಕ್ಷಣಾ ಸಚಿವರು ತಮ್ಮ ಭಾಷಣದಲ್ಲಿ 1971ರ ಯುದ್ಧವನ್ನು ಉಲ್ಲೇಖಿಸಿ, ಅವನತಿ ಹಾಗೂ ಹೀನಮಟ್ಟದ ಕ್ರಿಯೆಗಳ ಬೆನ್ನಲ್ಲೇ ಪಾಕಿಸ್ತಾನ 1971ರಲ್ಲಿ ಏನು ಅನುಭವಿಸಿತ್ತು ಎಂಬುದು ಇತಿಹಾಸದಲ್ಲಿ ನಮಗೆ ತಿಳಿದಿದೆ. ಇತ್ತೀಚಿನ ಆಪರೇಷನ್ ಕೂಡ ಪಾಕ್‌ಗೆ ಆ ನೆನಪನ್ನು ಮತ್ತೆ ಹುಟ್ಟಿಸಿದೆ, ಎಂದು ಹೇಳಿದರು.
INS ವಿಕ್ರಾಂತ್‌ನಲ್ಲಿನ ನೌಕಾಪಡೆಯ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ಮಾತನಾಡಿದ ಅವರು ಭಾರತೀಯ ನೌಕಾಪಡೆಯ ಶಕ್ತಿಯ ಬಗ್ಗೆ ಭರವಸೆ ವ್ಯಕ್ತಪಡಿಸಿದರು.








