ಕನ್ನಡ ಭಾಷೆ ಕುರಿತು ನೀಡಿದ ಹೇಳಿಕೆಯಿಂದ ತೀವ್ರ ವಿವಾದಕ್ಕೆ ಗುರಿಯಾಗಿರುವ ನಟ ಕಮಲ್ ಹಾಸನ್, ತಮ್ಮ ನಿಲುವಿಗೆ ಧಕ್ಕೆಯಾಗದಂತೆ ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಾದ್ಯಂತ ಅಭಿಮಾನಿಗಳು ಹಾಗೂ ಕನ್ನಡ ಪರ ಸಂಘಟನೆಗಳು ಕಮಲ್ ಹಾಸನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸುತ್ತಿದ್ದಾರೆ. ಈ ಸಂಬಂಧ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಮಲ್ ಹಾಸನ್, ತಾನು ಯಾವುದೇ ತಪ್ಪು ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ನಾನು ಕ್ಷಮೆ ಕೇಳಲಿಕ್ಕೆ ಕಾರಣವೇ ಇಲ್ಲ. ಏಕೆಂದರೆ ನಾನು ತಪ್ಪು ಮಾಡಿಲ್ಲ. ನಾನು ಯಾವತ್ತೂ ನನ್ನಿಂದ ತಪ್ಪು ಆಗಿದ್ರೆ ಕ್ಷಮೆ ಕೇಳುತ್ತೇನೆ. ಆದರೆ ಈ ವಿಚಾರದಲ್ಲಿ ನಾನು ನನ್ನ ನಂಬಿಕೆಯನ್ನು ವ್ಯಕ್ತಪಡಿಸಿದ್ದೇನೆ. ಅದು ಯಾರಿಗಾದರೂ ನೋವು ತಂದಿದ್ದರೆ ವಿಷಾದವಾಗಬಹುದು, ಆದರೆ ನಾನು ಕ್ಷಮೆ ಕೇಳಲ್ಲ, ಎಂದು ಅವರು ಸ್ಪಷ್ಟಪಡಿಸಿದರು.
ನಾನು ಯಾವ ಬೆದರಿಕೆ, ಎಚ್ಚರಿಕೆಗೂ ಬೆದರುವವನು ಅಲ್ಲ. ನಾನು ಭಯಪಡುವವನು ಅಲ್ಲ. ನಾನು ಸದಾ ಕಾನೂನು ಹಾಗೂ ನ್ಯಾಯದ ವ್ಯವಸ್ಥೆಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇನೆ. ನನ್ನ ಮಾತುಗಳ ಅರ್ಥ ತಪ್ಪಾಗಿ ತೆಗೆದುಕೊಳ್ಳಬಾರದು. ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಇದೆ, ಎಂದು ಅವರು ಹೇಳಿದರು.
ಕಮಲ್ ಹಾಸನ್ ನೀಡಿದ ಈ ಹೇಳಿಕೆ ಮತ್ತಷ್ಟು ಚರ್ಚೆಗೆ ಕಾರಣವಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಮತ್ತಷ್ಟು ಗಂಭೀರವಾಗಿ ತಲೆ ಎತ್ತಿದೆ. ಕನ್ನಡ ಅಭಿಮಾನಿಗಳು ಇನ್ನೂ ಕಮಲ್ ಹಾಸನ್ ಕ್ಷಮೆ ಕೇಳಲೇಬೇಕು ಎಂದು ಒತ್ತಡ ತರುತ್ತಿದ್ದಾರೆ.








