ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಕೊರೊನಾ ಸೋಂಕು ಮತ್ತೆ ತಲೆ ಎತ್ತಿದ್ದು, ದಿನೇ ದಿನೇ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಇತ್ತೀಚಿನ ವರದಿಯ ಪ್ರಕಾರ, ಪ್ರಸ್ತುತ ಭಾರತದಲ್ಲಿ 1,828 ಸಕ್ರಿಯ ಕೊರೊನಾ ಪ್ರಕರಣಗಳಿವೆ.
ಇದುವರೆಗೆ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದವರ ಸಂಖ್ಯೆ 15ಕ್ಕೆ ಏರಿದ್ದು, ಈ ಪೈಕಿ ಮಹಾರಾಷ್ಟ್ರದಲ್ಲಿ ಏಕಾಏಕಿ 6 ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಇದರಿಂದ ಮಹಾರಾಷ್ಟ್ರದ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕೊರೊನಾ ವೈರಸ್‌ನ ಹೊಸ ರೂಪಾಂತರಗಳು ಇದೀಗ ತಮಿಳುನಾಡು, ಕರ್ನಾಟಕ, ಕೇರಳ, ಪಂಜಾಬ್, ಗುಜರಾತ್ ಮತ್ತು ದೆಹಲಿ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಂಡುಬರುತ್ತಿರುವುದು ಆರೋಗ್ಯ ಇಲಾಖೆಗೆ ತೀವ್ರ ಚಿಂತೆ ಹುಟ್ಟಿಸಿದೆ.
ಗುಜರಾತ್‌ನಲ್ಲಿ ಕೇವಲ 8 ತಿಂಗಳ ಮಗುವಿಗೆ ಕೊರೊನಾ ಸೋಂಕು ತಗುಲಿದೆ. ಸೋಂಕಿನ ತೀವ್ರತೆಗೆ ಮಕ್ಕಳಲ್ಲಿ ಆಮ್ಲಜನಕ ಕೊರತೆ ಉಂಟಾಗಿ, ಆ ಮಗುವಿಗೆ ತಕ್ಷಣ ಆಕ್ಸಿಜನ್ ಚಿಕಿತ್ಸೆ ನೀಡಲಾಗಿದೆ. ಈ ಘಟನೆ ಆರೋಗ್ಯ ವ್ಯವಸ್ಥೆ ಮತ್ತಷ್ಟು ಎಚ್ಚರವಾಗಿರಬೇಕೆಂಬ ಸಂದೇಶ ನೀಡುತ್ತಿದೆ.
ಪ್ರಧಾನ ಆರೋಗ್ಯ ಕಾರ್ಯದರ್ಶಿ ಡಾ. ರಾಜೀವ್ ಭೂಷಣ್ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ದೇಶದಾದ್ಯಂತ ಸೋಂಕು ಹೆಚ್ಚು ವ್ಯಾಪಿಸುತ್ತಿರುವ ರಾಜ್ಯಗಳಿಗೆ ತಕ್ಷಣವೇ ತೀವ್ರ ನಿಗಾ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಜನಸಾಮಾನ್ಯರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮತ್ತು ಹ್ಯಾಂಡ್ ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಬೇಕು, ಎಂದು ಹೇಳಿದ್ದಾರೆ.
ಈ ಮಧ್ಯೆ, ದೇಶದ ಹಲವು ರಾಜ್ಯಗಳಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಕೋವಿಡ್‌ಗೆ ವಿರುದ್ಧವಾಗಿ ಲಸಿಕೆ ಪಡೆದಿರುವವರಲ್ಲಿ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿರುವ ಕಾರಣ, ಬೂಸ್ಟರ್ ಡೋಸ್ ನೀಡುವ ಕುರಿತಾದ ಚರ್ಚೆ ಮರು ಪ್ರಾರಂಭವಾಗಿದೆ.
ಜನರಲ್ಲಿ ಮತ್ತೆ ಆತಂಕ ಮನೆಮಾಡಿದ್ದು, ಸರ್ಕಾರದಿಂದಲೇ ನವೀನ ಮಾರ್ಗಸೂಚಿಗಳನ್ನು ಹೊರಡಿಸಲಾಗುವ ನಿರೀಕ್ಷೆ ಇದೆ. ಇನ್ನೂ ಮಾಸ್ಕ್ ಧರಿಸುವುದು, ಕೈ ತೊಳೆಯುವುದು ಮುಂತಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಈಗ ಅವಶ್ಯಕವಾಗಿದೆ.








