ಖಾದ್ಯ ತೈಲಗಳ ಬೆಲೆ ನಿಯಂತ್ರಣ ತರಲು ಭಾರತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ದೇಶೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಇಳಿಸಲು, ಸರ್ಕಾರವು ಕಚ್ಚಾ ಖಾದ್ಯ ತೈಲಗಳ ಮೇಲಿನ ಮೂಲ ಆಮದು ಸುಂಕವನ್ನು ಇನ್ನು 10% ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ. ಈ ತೀರ್ಮಾನವು ಮೇ 31ರಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಈ ನಿರ್ಧಾರದ ಅಡಿಯಲ್ಲಿ ಕಚ್ಚಾ ಪಾಮ್ ಎಣ್ಣೆ (Crude Palm Oil), ಕಚ್ಚಾ ಸೋಯಾಬೀನ್ ಎಣ್ಣೆ (Crude Soybean Oil) ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆ (Crude Sunflower Oil)ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ ಈಗ 10% ಕ್ಕೆ ಇಳಿಯಲಿದೆ. ಈ ಹಿಂದೆ ಇದೇ ಸುಂಕ 20% ಇತ್ತು, ನಂತರದ ಹಂತದಲ್ಲಿ 10%ಗೆ ಇಳಿಸಿ, ಇದೀಗ ಮತ್ತೆ ಹೆಚ್ಚುವರಿ 10% ಕಡಿತವಾಗಿದೆ.
ಈ ಮೂಲಕ, ಈ ಮೂರು ತೈಲಗಳ ಮೇಲೆ ವಿಧಿಸಲಾದ ಒಟ್ಟು ಆಮದು ಸುಂಕವು ಈಗ 27.5% ನಿಂದ 16.5% ಕ್ಕೆ ಇಳಿಯಲಿದೆ. ಈ ನಿರ್ಧಾರದಿಂದ ತೈಲದ ಆಮದು ಖರ್ಚು ಕಡಿಮೆಯಾಗಲಿದೆ ಮತ್ತು ದೇಶೀಯ ಬಳಕೆದಾರರಿಗೆ ಖರೀದಿ ದರಗಳಲ್ಲಿ ಉತ್ತಮ ಅನುಕೂಲ ಸಿಗಲಿದೆ ಎನ್ನಲಾಗಿದೆ.
ಅಡುಗೆ ತೈಲದ ಬೆಲೆ ಇತ್ತೀಚೆಗೆ ಏರಿಕೆ ಕಾಣುತ್ತಿದ್ದ ಹಿನ್ನೆಲೆಯಲ್ಲಿ, ಈ ಕ್ರಮವು ಸಾಮಾನ್ಯ ಜನತೆಗೆ ಗುಡ್ ನ್ಯೂಸ್ ಆಗಿದೆ. ಸರ್ಕಾರವು ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇದೆ ಎಂದು ಮೂಲಗಳು ಸೂಚಿಸಿದೆ.








