ಮಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗುತ್ತಿರುವ ರೀತಿಯಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೊರೊನಾ ಆರ್ಭಟಿಸುತ್ತಿದೆ. ಹೀಗಾಗಿ ಜಿಲ್ಲೆಯ ಕೆಲ ಭಾಗಗಳಲ್ಲಿ ಜನರು ಸ್ವಯಂ ಪ್ರೇರಿತರಾಗಿ ಲಾಕ್ ಡೌನ್ ಮಾಡಿಕೊಂಡಿದ್ದಾರೆ. ಇದರ ಮಧ್ಯೆ ನಿನ್ನೆ ರಾಜ್ಯ ಸರ್ಕಾರ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯೂ ಲಾಕ್ ಡೌನ್ ಆಗುತ್ತಾ ಎಂಬ ಪ್ರಶ್ನೆ ಜಿಲ್ಲೆಯ ಜನರಲ್ಲಿ ಮೂಡಿದ್ದು, ಈ ಬಗ್ಗೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಹೀಗಾಗಿ ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಾಕ್ ಡೌನ್ ಮಾಡುವ ಕುರಿತಂತೆ ಜಿಲ್ಲೆಯ ಸಂಸದರು, ಶಾಸಕರು, ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾತುಕತೆ ನಡೆಸಲಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಚರ್ಚೆ ನಡೆಸಲಿರುವುದಾಗಿ ಹೇಳಿದ್ದಾರೆ.
ಜಿಲ್ಲೆಯ ಅಲ್ಲಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಜನರಿಗೆ ತೊಂದರೆ ಆಗುವ ಯಾವುದೇ ನಿರ್ಧಾರವನ್ನು ಧಿಡೀರನೇ ಜಾರಿಗೆ ತರುವುದಿಲ್ಲ. ಜನರು ಗೊಂದಲಕ್ಕೀಡಾಗಬಾರದು ಎಂದ ಸಚಿವರು, ಯಾವುದೇ ತೀರ್ಮಾನವನ್ನು ನಾಳೆಯ ಸಭೆಯಲ್ಲಿ ಮುಖ್ಯಮಂತ್ರಿಗಳ ಸಲಹೆ ಸೂಚನೆಯಂತೆ ಅನುಸರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.








