ಆರ್‌ಸಿಬಿ (RCB) ವಿಜಯೋತ್ಸವದ ಸಂದರ್ಭದಲ್ಲಿ ನಡೆದ ದುರಂತಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ರಾಜ್ಯ ಸರ್ಕಾರವು ಆರ್‌ಸಿಬಿ ವಿಜಯೋತ್ಸವವನ್ನು ಒಂದೇ ದಿನದಲ್ಲಿ ಬಹುಸಂಖ್ಯೆಯ ಅಭಿಮಾನಿಗಳೊಂದಿಗೆ ಆಚರಿಸಲು ಅನುಮತಿ ನೀಡಿದ್ದು ಯಾಕೆ? ಎಂದು ಜೆಡಿಎಸ್ ಪ್ರಶ್ನಿಸಿದೆ. ಸಾರ್ವಜನಿಕ ಭದ್ರತೆ, ಬೃಹತ್ ಜನಸಂಖ್ಯೆಯ ನಿರ್ವಹಣೆ ಹಾಗೂ ಎಲ್ಲ ರೀತಿಯ ವ್ಯವಸ್ಥಾಪನದಲ್ಲಿ ಸರ್ಕಾರ ವೈಫಲ್ಯವೊಂದೇ ಕಂಡುಬರುತ್ತದೆ ಎಂದು ತೀವ್ರವಾಗಿ ಟೀಕಿಸಿದೆ.
ಸರ್ಕಾರ ಆಡಳಿತಕ್ಕಿಂತ ಹೆಚ್ಚು ಪ್ರಚಾರ ಮತ್ತು ಜಾಹೀರಾತಿಗೆ ಒತ್ತು ನೀಡುತ್ತಿದೆ. ಮಾಧ್ಯಮಗಳಲ್ಲಿ ಶೋ ಆಫ್ ಮಾಡಿಕೊಳ್ಳಲು ಹೋಗಿ, ಮುಗ್ಧ ಜನರ ಜೀವಗಳು ಬಲಿಯಾದಂತಾಗಿದೆ. ಈ ಕುರಿತು ಜೆಡಿಎಸ್ ತಮ್ಮ X ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಘಟನೆಯ ಪ್ರಕಾರ, ಜನಸಂದಣಿ ನಿಯಂತ್ರಣವಿಲ್ಲದೆ ಜನರು ಸಾವಿಗೀಡಾದ ಘಟನೆಗೆ ಸರಕಾರ ನೈತಿಕ ಹೊಣೆ ಹೊರಬೇಕು. ಜನರ ಪ್ರಾಣವನ್ನೇ ತೆಗೆದ ಈ ದುರಂತದಲ್ಲಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಹೀಗಾಗಿ ತಕ್ಷಣವೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ಮತ್ತು ಗೃಹ ಸಚಿವ ಪರಮೇಶ್ವರ ರಾಜೀನಾಮೆ ನೀಡಬೇಕು ಎಂಬುದಾಗಿ ಜೆಡಿಎಸ್ ಆಗ್ರಹಿಸಿದೆ.
ಸಾಮಾನ್ಯ ಜನರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕಾದ ಸರ್ಕಾರ, ಜನಸಂದಣಿಯ ನಡುವೆ ವ್ಯವಸ್ಥಿತ ನಿಯಂತ್ರಣ ಉಂಟುಮಾಡದೆ ಈ ರೀತಿಯ ಸಮಾರಂಭಕ್ಕೆ ಅನುಮೋದನೆ ನೀಡಿರುವುದು ಕ್ರೂರ ನಿರ್ಧಾರ ಎಂದು ಹಲವಾರು ಸಮಾಜ ಕಾರ್ಯಕರ್ತರೂ ಟೀಕಿಸಿದ್ದಾರೆ.








