ಐಪಿಎಲ್ ವಿಜಯೋತ್ಸವದ ವೇಳೆ ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತ ದುರಂತದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಫೋಟಕ ಕ್ರಮ ಕೈಗೊಂಡಿದ್ದಾರೆ. ಈ ದುರಂತಕ್ಕೆ ಕಾರಣರಾಗಿ ಕಂಡುಬಂದಿರುವ ಆರ್‌ಸಿಬಿ (RCB) ತಂಡ, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KCA) ಹಾಗೂ ಕಾರ್ಯಕ್ರಮ ಆಯೋಜಿಸಿದ ಖಾಸಗಿ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಸಿದ್ಧರಾಮಯ್ಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಎಫ್‌ಐಆರ್ ನಂತರ ಬಂಧನಕ್ಕೆ ಸೂಚನೆ
ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆಗೆ ಎಫ್‌ಐಆರ್ ದಾಖಲಿಸಿ, ತನಿಖೆ ಆರಂಭಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಎಫ್‌ಐಆರ್ ದಾಖಲಾದ ನಂತರ, ಸಂಬಂಧಪಟ್ಟ ಎಲ್ಲಾ ಪ್ರತಿಷ್ಠಾನಗಳ ಪ್ರತಿನಿಧಿಗಳನ್ನು ಬಂಧಿಸುವಂತೆ ಆದೇಶಿಸಲಾಗಿದೆ. ಇದು ಪ್ರಕರಣಕ್ಕೆ ಗಂಭೀರತೆಯನ್ನು ತಂದುಕೊಟ್ಟಿದ್ದು, ಯಾವುದೇ ರಾಜಕೀಯ ರಕ್ಷಣೆಯಿಲ್ಲ ಎಂಬ ಸಂದೇಶವನ್ನೂ ಸಾರಿದೆ.
ತನಿಖೆಗೆ ಏಕಸದಸ್ಯ ಆಯೋಗ – ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ತನಿಖೆ
ಕಾಲ್ತುಳಿತದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈ ಕುರಿತು ತನಿಖೆ ನಡೆಸಲು ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿದೆ. ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರಿಗೆ ಈ ಆಯೋಗದ ನೇತೃತ್ವ ವಹಿಸಲಾಗಿದೆ. ಅವರು ದುರಂತದ ನಿಜವಾದ ಕಾರಣಗಳು, ದೋಷಿಗಳ ಹೊಣೆಗಾರಿಕೆ ಮತ್ತು ಭದ್ರತಾ ಉಲ್ಲಂಘನೆಗಳ ಕುರಿತು ಸಂಪೂರ್ಣ ತನಿಖೆ ನಡೆಸಲಿದ್ದಾರೆ.








