ಪ್ರಧಾನಮಂತ್ರಿ ನರೆಂದ್ರ ಮೋದಿ ಅವರು ಜೂನ್ 21 ರಂದು ಆಚರಿಸಲಿರುವ 10ನೇ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ದೇಶದ ಜನತೆಗೆ ವಿಶೇಷ ಬಹಿರಂಗ ಪತ್ರ ಬರೆದು, ಎಲ್ಲರನ್ನೂ ಯೋಗದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದಾರೆ. ಯೋಗವು ಕೇವಲ ವ್ಯಕ್ತಿಗತ ಆರೋಗ್ಯದ ವಿಷಯವಲ್ಲ. ಇದು ಮಾನವೀಯ ಮೌಲ್ಯಗಳು, ಪರಿಸರ ಸಂರಕ್ಷಣೆ ಮತ್ತು ಜಾಗತಿಕ ಏಕತೆಯ ಪ್ರತೀಕವಾಗಿದೆ ಎಂದು ಮೋದಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ವರ್ಷದ ಯೋಗ ದಿನದ ಥೀಮ್ “Yoga for Self and Society ಅಥವಾ ಯೋಗ: ಒಂದು ಭೂಮಿ, ಒಂದು ಆರೋಗ್ಯ ಎಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಮೋದಿ ಅವರು ಆಂಧ್ರಪ್ರದೇಶದ ವಿಶಾಖಪಟ್ಟಣ ನಗರದಲ್ಲಿ ಈ ವರ್ಷದ ಪ್ರಮುಖ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾವಿರಾರು ಜನರು ಭಾಗವಹಿಸಲಿರುವ ಈ ಕಾರ್ಯಕ್ರಮದಲ್ಲಿ ಹಲವು ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಯೋಗ ಗುರುಗಳ ಉಪಸ್ಥಿತಿ ನಿರೀಕ್ಷಿಸಲಾಗಿದೆ.
ಪತ್ರದ ಮೂಲಕ ಮೋದಿ ಅವರು, “ಯೋಗವು ನಾವೆಲ್ಲರೂ ಒಂದೆನ್ನುವ ಭಾವನೆಗೆ ಬಲ ನೀಡುತ್ತದೆ. ಅದು ನಮ್ಮ ಅಂತರಂಗದ ಶಾಂತಿಯನ್ನು ಹೆಚ್ಚಿಸುವುದರೊಂದಿಗೆ, ನಮ್ಮ ನಡುವಿನ ಮಾನವೀಯ ಸಂಬಂಧಗಳಿಗೂ ಹೊಸ ಬೆಳಕು ನೀಡುತ್ತದೆ. ಈ ಶಕ್ತಿಶಾಲಿ ಪರಂಪರೆಯು ಭಾರತದಿಂದ ಆರಂಭವಾಗಿ ಇಡೀ ಜಗತ್ತಿಗೆ ಬೆಳಕಾಗುತ್ತಿದೆ ಎಂದು ಉಲ್ಲೇಖಿಸಿದ್ದಾರೆ.








