ನವದೆಹಲಿ ಜೂಲೈ 12 : ಮಹತ್ವದ ಬೆಳವಣಿಗೆಯಲ್ಲಿ ರಾಜಸ್ತಾನದ ಕಾಂಗ್ರೆಸ್ ಸರಕಾರ ಇದೀಗ ಮಧ್ಯಪ್ರದೇಶದ ಹಾದಿ ಹಿಡಿದಿದ್ದು ಕೈ ತಪ್ಪುವ ಲಕ್ಷಣಗಳು ಬಹುತೇಕ ಸನಿಹದಲ್ಲಿದೆ. ಸರಕಾರ ರಚನೆ ಆದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಹೊಸ ನಾಯಕರಿಗೆ ಮಣೆ ಹಾಕುವ ಬದಲು ಹಳೆಯ ನಾಯಕರಿಗೆ ಪಟ್ಟ ಕಟ್ಟಿದ ಕಾರಣ ನಡೆಯುತಿದ್ದ ಮುಸುಕಿನ ಗುದ್ದಾಟ ಇದೀಗ ಕ್ಲೈಮಾಕ್ಸ್ ಹಂತ ತಲುಪಿದೆ. ಮಧ್ಯಪ್ರದೇಶ ಮತ್ತು ರಾಜಸ್ತಾನದಲ್ಲಿ ಅಧಿಕಾರ ಹಿಡಿದ ಕಾಂಗ್ರೆಸ್ ಯುವ ನಾಯಕರಾದ ಸಿಂಧಿಯಾ ಮತ್ತು ಸಚಿನ್ ಪೈಲಟ್ ಅವರನ್ನು ಕಡೆಗಣಿಸಿ ಸೋನಿಯಾ ಅಪ್ತರಾದ ಕಮಲ್ನಾಥ್ ಮತ್ತು ಅಶೋಕ್ ಗೆಹ್ಲೋಟ್ ಅನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದರು. ಆದರೆ ಈಗಾಗಲೇ ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯಕ್ಕೆ ತೆರೆ ಎಳೆದಿದ್ದು ಬಿಜೆಪಿ ಅಧಿಕಾರ ರಚಿಸಿದ್ದರೆ ಇದೀಗ ರಾಜಸ್ತಾನವು ಬಿಜೆಪಿ ಪಾಲಾಗುವುದರಲ್ಲಿ ಸಂದೇಹವಿಲ್ಲ.
ಬಂಡಾಯದ ನಡುವೆ ದೆಹಲಿಯಲ್ಲಿ ಬೀಡುಬಿಟ್ಟಿರುವ ಸಚಿನ್ ಪೈಲಟ್ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಭೇಟಿ ಮಾಡಿ ಸಿಎಂ ಅಶೋಕ್ ಗೆಹ್ಲೋಟ್ ಮೇಲಿರುವ ತನ್ನ ಅಸಮಾಧಾನವನ್ನು ಹೊರಹಾಕಲು ಬಯಸಿದ್ದ ಸಚಿನ್ ಪೈಲಟ್ಗೆ ನಿರಾಸೆಯಾಗಿದೆ ಎಂದು ವರದಿಗಳಿಂದ ತಿಳಿದು ಬಂದಿದೆ. ಸಚಿನ್ ಪೈಲಟ್ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದು, ಕಾಂಗ್ರೆಸ್ ಅಧ್ಯಕ್ಷೆ ಪೈಲಟ್ ಅವರಿಗೆ ಕೂಡಲೇ ಜೈಪುರಕ್ಕೆ ಹಿಂದಿರುಗಿ, ಹೈಕಮಾಂಡ್ ನಾಯಕರಾದ ಅಜಯ್ ಮಕೇನ್, ರಾಜಸ್ಥಾನ ಕಾಂಗ್ರೆಸ್ ಪ್ರದೇಶ್ ಅಧ್ಯಕ್ಷ ಅವಿನಾಶ್ ಪಾಂಡೆ ಹಾಗೂ ಪಕ್ಷದ ಹಿರಿಯ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿಯಾಗಿ ಚರ್ಚಿಸುವಂತೆ ಸಲಹೆ ಮಾಡಿದರಲ್ಲದೆ , ಸಿಎಂ ಅಶೋಕ್ ಗೆಹ್ಲೋಟ್ ನೇತೃತ್ವದ ಆಡಳಿತಕ್ಕೆ ಸಹಕಾರ ನೀಡಿ ಎಂದು ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ಈ ನಡುವೆ ಗೆಹ್ಲೋಟ್ ಮನೆಯಲ್ಲಿ ನಡೆದ ಶಾಸಕರ ಸಭೆಗೆ 22 ಅತೃಪ್ತ ಶಾಸಕರು ಗೈರಾಗಿದ್ದು ಸೋಮವಾರ ನಡೆಯಲಿರುವ ಸಿ.ಎಲ್.ಪಿ ಸಭೆಯಲ್ಲಿ ಕೂಡ ಸಚಿನ್ ಪೈಲಟ್ ಪಾಲ್ಗೊಳ್ಳುವುದು ಅನುಮಾನವಾಗಿದೆ. ಈಗಾಗಲೇ ಬೆದರಿಕೆಯ ತಂತ್ರವಾಗಿ ವಿಪ್ ಜಾರಿಯಾಗಿದ್ದು, 6 ವರ್ಷದ ಅಮಾನತ್ತಿನ ತೂಗುಗತ್ತಿ ಸಚಿನ್ ರಾಜಕೀಯ ಭವಿಷ್ಯಕ್ಕೆ ಮುಳುವಾಗಬಹುದು. ಗೆಹ್ಲೋಟ್ ಈ ಸಭೆಯಲ್ಲಿ ತನ್ನ ಎಲ್ಲಾ ಮತ್ರಿ ಮಂಡಲದ ಸಚಿವರಿಗೆ ರಾಜೀನಾಮೆ ನೀಡಲು ಸಲಹೆ ನೀಡಬಹುದು .
ಈಗಾಗಲೇ ಸಿಂಧಿಯಾ ಜೊತೆ ಮಾತುಕತೆ ನಡೆಸಿರುವ ಸಚಿನ್ ಪೈಲಟ್ ಬಹುತೇಕ ಬಿ ಜೆ ಪಿ ತೆಕ್ಕೆಗೆ ಜಾರಿರುವುದರಲ್ಲಿ ಅನುಮಾನವಿಲ್ಲ. ಹೊಸ ನಾಯಕರ ಹುಡುಕಾಟದಲ್ಲಿದ್ದ ಕಾಂಗ್ರೆಸ್ ಹಳೆಯ ನಾಯಕರಿಗೆ ಮಣೆ ಹಾಕಿದ ತಪ್ಪಿಗೆ ಇದೀಗ ಸರಕಾರಗಳೇ ಅಧಃಪತನ ಕಾಣುತ್ತಿವೆ








