ಹೈದರಾಬಾದ್: ಮಹಾಮಾರಿ ಕೊರೊನಾ ಶರವೇಗದಲ್ಲಿ ಹಬ್ಬುತ್ತಿದ್ದು, ಜನರನ್ನು ಆತಂಕದ ಕೂಪಕ್ಕೆ ತಳ್ಳುತ್ತಿದೆ.
ಕೊರೊನಾ ಹರಡುವಿಕೆಯನ್ನೇ ಬಂಡವಾಳ ಮಾಡಿಕೊಂಡ ಅದೆಷ್ಟೋ ದಂಧೆಕೋರರು ಸಾಮಾನ್ಯ ಜನರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದಾರೆ. ಹೈದರಾಬಾದ್‍ನಲ್ಲಿ ನಡೆಯುತ್ತಿದ್ದ ಅಕ್ರಮ ಆಮ್ಲಜನಕ ಸಿಲಿಂಡರ್ ದಂಧೆ ಮೇಲೆ ಪೊಲಿಸರು ನಡೆಸಿದ ದಾಳಿ ವೇಳೆ ದಂಧೆಯ ಕರಾಳ ಮುಖ ಬಯಲಾಗಿದೆ.
ದಿನದಿಂದ ದಿನಕ್ಕೆ ಸಾವಿರ ಲೆಕ್ಕದಲ್ಲಿ ಕರೊನಾ ಸೋಂಕಿತ ಪ್ರಕರಣಗಳು ಹೈದರಾವಾದ್‍ನಲ್ಲಿ ದಾಖಲಾಗುತ್ತಿವೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಸತ್ರೆಗಳಲ್ಲಿ ಬೆಡ್‍ಗಳ ಕೊರತೆ ಉಂಟಾಗಿದ್ದು, ಹೀಗಾಗಿ ಹೋಂ ಐಸೋಲೇಶನ್(ಮನೆಯಲ್ಲೇ ಕೊರೊನಾ ಚಿಕಿತ್ಸೆ)ಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಪರಿಣಾಮವಾಗಿ ಆಕ್ಸಿಜನ್ ಸಿಲಿಂಡರ್(ಆಮ್ಲಜನಕ)ಗೂ ಬೇಡಿಕೆ ಹೆಚ್ಚಿದೆ.
ಇದನ್ನೇ ಬಂಡವಾಳ ಮಾಡಿಕೊಂಡ ದಂಧೆಕೋರರು ಒಂದು ಸಿಲಿಂಡರ್ ಬೆಲೆಯನ್ನು 1 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಹೈದರಾಬಾದ್ ಪೊಲೀಸರಿಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ದಂಧೆಕೋರರ ಮೇಲೆ ದಾಳಿ ಮಾಡಿದ್ದಾರೆ.
ದಾಳಿ ವೇಳೆ ಲೈಸೆನ್ಸ್ ಇಲ್ಲದವರೂ ಕೊರೊನಾವನ್ನೇ ಬಂಡವಾಳ ಮಾಡಿಕೊಂಡು ಅಕ್ರಮವಾಗಿ ಆಮ್ಲಜನಕ ಸಿಲಿಂಡರ್ ಮಾರಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಹೈದರಾಬಾದ್‍ನ ಉತ್ತರ ವಿಭಾಗದ ಪೊಲೀಸ್ ಆಯುಕ್ತರ ನೇತೃತ್ವದ ಟಾಸ್ಕ್‍ಫೋರ್ಸ್ ದಾಳಿ ನಡೆಸಿ ಶೇಕ್ ಅಬ್ಬಾಸ್ ಎಂಬಾತನನ್ನು ಬಂಧಿಸಿದೆ. ಈ ಜಾಲದಲ್ಲಿ ಮತ್ತಷ್ಟು ಜನರು ಭಾಗಿಯಾಗಿದ್ದು, ಅವರ ವಿರುದ್ಧವೂ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.
ಆಮ್ಲಜನಕ ಸಿಲಿಂಡರ್ ಪೂರೈಕೆದಾರರಿಂದ ಕಡಿಮೆ ದರಕ್ಕೆ ಆಮ್ಲಜನಕ ಸಿಲಿಂಡರ್ ಪಡೆಯುವ ದಂಧೆಕೋರರು, ಕೋವಿಡ್ ಸೋಂಕಿತರಿಗೆ ದುಬಾರಿ ಬೆಲೆಗೆ ಸಿಲಿಂಡರ್ ನೀಡುತ್ತಿದ್ದಾರೆ. ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 19 ಆಮ್ಲಜನಕ ಸಿಲಿಂಡರ್ ಜಪ್ತಿ ಮಾಡಿರುವ ಪೊಲೀಸರು ಕಿಂಗ್ಪಿನ್ ಶೇಕ್ ಅಬ್ಬಾಸ್‍ನನ್ನು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ.
ಈ ದಂಧೆ ನಡೆಯುತ್ತಿರುವುದು ಇಂದು, ನಿನ್ನೆಯದಲ್ಲ. ಹಲವು ವರ್ಷಗಳಿಂದ ದಂಧೆ ನಡೆಸುತ್ತಿರುವ ದುಷ್ಕರ್ಮಿಗಳು ಕೃತಕ ಅಭಾವ ಸೃಷ್ಟಿಸಿ ಭಾರಿ ಬೆಲೆ ಆಮ್ಲಜನಕ ಸಿಲಿಂಡರ್ ಮಾರಾಟ ಮಾಡುತ್ತಿದ್ದಾರೆ. ಇನ್ನಾದರೂ ತೆಲಂಗಾಣ ಸರ್ಕಾರ ಈ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕಿದೆ.