ಬೆಂಗಳೂರು : ಒಂದು ಕಡೆ ಕೊರೊನಾ ಸ್ಫೋಟ, ಮತ್ತೊಂದೆಡೆ ಲಾಕ್ ಡೌನ್ ನಿಂದಾಗಿ ಬೆಂಗಳೂರಿನಿಂದ ಜನರು ತಮ್ಮ ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸರ್ಕಾರ ನಡೆಸೋಕೆ ಅವರಿಗೆ ಆಗುತ್ತಿಲ್ಲ ಅದಕ್ಕೆ ಬೆಂಗಳೂರಿನಿಂದ ಜನ ಊರು ಕಡೆ ಹೊರಡುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಿಜೆಪಿ ಅಜೆಂಡಾದಂತೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ನಮಗೂ ಅವಕಾಶ ಕೊಡಿ ಅಂದಿದ್ದೇವೆ. ನಮ್ಮಕಾರ್ಯಕರ್ತರು ಸೇವೆ ಮಾಡೋಕೆ ಇದ್ದಾರೆ. ಆದರೆ, ಅವರು ಅವಕಾಶವನ್ನೇ ನೀಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ದೂರಿದ ಡಿಕೆಶಿ, ಪಾಪ ಅವರು ಏನ್ ಬೇಕೋ ಅದನ್ನು ಮಾಡಿಕೊಳ್ಳಲಿ ಅವರ ಕಾರ್ಯಕರ್ತರಿಗಷ್ಟೇ ಕರೆ ಕೊಡುತ್ತಾರೆ. ಸರ್ಕಾರದ ಮಧ್ಯೆ ನಾವೇಕೆ ಪ್ರವೇಶಿಸಬೇಕು. ನಮ್ಮನ್ನ ಕರೆದಾಗ ನಾವು ಏನು ಹೇಳಬೇಕು ಹೇಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರ ಕಾರ್ಯವೈಕರಿ ಸರಿಯಾಗಿ ಆಗುತ್ತಿಲ್ಲ, ಅವರ ಸಚಿವರಲ್ಲೇ ಹೊಂದಾಣಿಕೆ ಇಲ್ಲ, ಆರೋಗ್ಯ, ಮೆಡಿಕಲ್ ಶಿಕ್ಷಣ ಸಚಿವರು ಒಂದೊಂದು ಹೇಳಿಕೆ ನೀಡುತ್ತಾರೆ. ಅವರಲ್ಲೇ ಅವರಿಗೆ ನಂಬಿಕೆಯಿಲ್ಲ, ಅಧಿಕಾರಿಗಳ ಮೇಲೂ ನಂಬಿಕೆಯಿಲ್ಲ, ಸರ್ಕಾರ ನಡೆಸೋಕೆ ಅವರಿಗೆ ಆಗುತ್ತಿಲ್ಲ ಅದಕ್ಕೆ ಬೆಂಗಳೂರಿನಿಂದ ಜನ ಊರು ಕಡೆ ಹೊರಡುತ್ತಿದ್ದಾರೆ. ಜನರಿಗೆ ಸರಿಯಾದ ಭರವಸೆನೂ ಕೊಡುತ್ತಿಲ್ಲ, ಜನ ಇನೇನು ಮಾಡುತ್ತಾರೆ ನೀವೇ ಹೇಳಿ ಎಂದು ಡಿ.ಕೆ ಶಿವಕುಮಾರ್ ಸರ್ಕಾರದ ವಿರುದ್ಧ ಗರಂ ಆಗಿದ್ದಾರೆ.








