ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳನ್ನು ಒಂದು ವಾರ ಲಾಕ್‍ಡೌನ್ ಮಾಡಿದ ಬೆನ್ನಲ್ಲೆ, ದಕ್ಷಿಣ ಕನ್ನಡ ಹಾಗೂ ಧಾರವಾಡ ಜಿಲ್ಲೆಗಳಲ್ಲೂ ಒಂದು ವಾರ ಲಾಕ್‍ಡೌನ್‍ಗೆ ನಿರ್ಧರಿಸಲಾಗಿದೆ.
ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆಯ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ರಾತ್ರಿಯಿಂದ ಒಂದು ವಾರ ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ.
ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಬುಧವಾರ ಸಂಜೆಯಿಂದ ಜಿಲ್ಲೆಯಲ್ಲಿ ಕಠಿಣ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ. ಆದರೆ, ಈ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು ಎಂದರು.
ಬುಧವಾರದಿಂದ ಧಾರವಾಡ ಲಾಕ್‍ಡೌನ್
ಧಾರವಾಡ ಜಿಲ್ಲೆಯಲ್ಲೂ ಬುಧವಾರ ಸಂಜೆಯಿಂದ ಲಾಕ್‍ಡೌನ್ ಮಾಡಲು ನಿರ್ಧರಿಸಲಾಗಿದೆ. ಬುಧವಾರದಿಂದ ಜುಲೈ 24ರವರೆಗೆ ಲಾಕ್‍ಡೌನ್ ಮಾಡಲಾಗುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜತೆ ಮಾತನಾಡಿ ಅನುಮತಿ ಪಡೆದಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶಿವಮೊಗ್ಗ ನಗರ ಹಾಫ್ ಡೇ ಲಾಕ್‍ಡಾನ್..!
ಕೆಲ ಜಿಲ್ಲೆಗಳು ಇಡೀ ದಿನ ಲಾಕ್‍ಡೌನ್‍ಗೆ ನಿರ್ಧರಿಸಿದ್ದರೆ ಶಿವಮೊಗ್ಗ ನಗರದಲ್ಲಿ ಮಾತ್ರ ಹಾಫ್ ಡೇ ಲಾಕ್‍ಡೌನ್ ಮಾಡಲು ತೀರ್ಮಾನಿಸಲಾಗಿದೆ.
ಮಧ್ಯಾಹ್ನ 3 ಗಂಟೆಯಿಂದ ಮಾರನೆಯ ದಿನ ಬೆಳಿಗ್ಗೆ 5 ಗಂಟೆವರೆಗೆ ಮುಂದಿನ ಆದೇಶದವರೆಗೆ ಲಾಕ್‍ಡೌನ್ ಆದೇಶ ಜಾರಿಯಲ್ಲಿರುತ್ತದೆ. ಇಂದು ಮಧ್ಯಾಹ್ನ 3 ಗಂಟೆಯಿಂದಲೇ ಹಾಫ್‍ಡೇ ಲಾಕ್‍ಡೌನ್ ಆರಂಭವಾಗಲಿದೆ ಎಂದು ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತ ಚಿದಾನಂದ ತಿಳಿಸಿದ್ದಾರೆ.








