ಸಿದ್ದರಾಮಯ್ಯ ಮೈಸೂರು ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್‌ಗಿಂತ ಹೆಚ್ಚು ಕೊಡುಗೆ ನೀಡಿದ್ದಾರೆ ಎಂಬ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿರುಗೇಟು ನೀಡಿದ್ದಾರೆ.
ಯತೀಂದ್ರ ಸಿದ್ದರಾಮಯ್ಯ ಹೇಳಿಕೆ: ನಾಲ್ವಡಿಗಿಂತ ಹೆಚ್ಚು ಅನುದಾನ
ವಿಧಾನಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, ಮೈಸೂರು ನಗರದ ಅಭಿವೃದ್ಧಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗಿಂತ ಹೆಚ್ಚು ಅಥವಾ ಅಷ್ಟೇ ಪ್ರಮಾಣದಲ್ಲಿ ಅನುದಾನ ನೀಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಎಂದು ಹೇಳಿದ್ದಾರೆ. ಮೈಸೂರಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಸಿದ್ದರಾಮಯ್ಯ ಮಾಡಿದ್ದಾರೆ. ವಿರೋಧ ಪಕ್ಷದವರು ಸುಮ್ಮನೆ ಟೀಕಿಸುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಯದುವೀರ್ ಒಡೆಯರ್ ತಿರುಗೇಟು: ಸತ್ಯಕ್ಕೆ ದೂರವಾದ ಹೇಳಿಕೆ
ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳು ಇಡೀ ವಿಶ್ವವೇ ಮೈಸೂರು ಸಂಸ್ಥಾನವನ್ನು ತಿರುಗಿ ನೋಡುವಂತೆ ಅಭಿವೃದ್ಧಿಗೊಳಿಸಿ, ಜನಪರ ಆಡಳಿತ ನಡೆಸಿ, ಕನ್ನಡಿಗರ ಹೃದಯದಲ್ಲಿ ಅಜರಾಮರರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯವರಾಗಿದ್ದು, ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ, ಅವರು ನೀಡಿದ ಅನುದಾನಗಳು ಎಷ್ಟರ ಮಟ್ಟಿಗೆ ಕಾರ್ಯರೂಪಕ್ಕೆ ಬಂದು ಸಮಾಜಕ್ಕೆ ತಲುಪಿವೆ ಎಂಬುದನ್ನು ಜನ ನೋಡಿದ್ದಾರೆ. ಇದಕ್ಕೆ 2018ರಲ್ಲೇ ಚಾಮುಂಡೇಶ್ವರಿ ಕ್ಷೇತ್ರದ ಜನ ಸರಿಯಾದ ಉತ್ತರ ನೀಡಿದ್ದಾರೆ ಎಂದು ಯದುವೀರ್ ತಿರುಗೇಟು ನೀಡಿದ್ದಾರೆ.
ಮಹಾರಾಜರ ಸಾಧನೆಗಳನ್ನು ಹೋಲಿಸುವುದು ಸರಿಯಲ್ಲ
ನಾಲ್ವಡಿ ಮಹಾರಾಜರು ಅಂದಿನ ಪರಿಸ್ಥಿತಿಯಲ್ಲಿ ಮೈಸೂರು ಪ್ರಾಂತ್ಯದಲ್ಲಿ ಯಾವುದಕ್ಕೂ ಕೊರತೆ ಬಾರದಂತೆ ನೋಡಿಕೊಂಡು, ತಮ್ಮ ದೂರದೃಷ್ಟಿಯ ಆಡಳಿತದಿಂದ ಅಕ್ಷರಶಃ ಸುವರ್ಣಯುಗವನ್ನೇ ಸೃಷ್ಟಿಸಿದ್ದರು. ಇಂತಹ ಮಹನೀಯರ ಸಾಧನೆಗಳನ್ನು ಗೌರವಿಸಿ ಸ್ಮರಿಸಬೇಕೇ ಹೊರತು, ಅದನ್ನು ಅಳೆದು ತೂಗಿ ಹೋಲಿಸಬಾರದು ಎಂದು ಯದುವೀರ್ ಹೇಳಿದ್ದಾರೆ.
ಮುಖ್ಯಮಂತ್ರಿಯ ಮಗ ಎಂಬ ಕಾರಣಕ್ಕೆ ಯತೀಂದ್ರ ಅವರು ಏನು ಬೇಕಾದರೂ ಹೇಳಿಕೆ ನೀಡಬಾರದು. ಅವರು ನೀಡಿರುವ ಹೇಳಿಕೆಯು ಸತ್ಯಕ್ಕೆ ದೂರವಾದುದು ಎಂದು ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ರಾಜಕೀಯಕ್ಕಾಗಿ ಮಾತಿನ ಕೊಡಲಿ ಪೆಟ್ಟು ಬೇಡ
ಮೈಸೂರು ಸಂಸ್ಥಾನವನ್ನು ಆಳಿದ ಪ್ರತಿ ಮಹಾರಾಜರೂ ಈ ನೆಲದಲ್ಲಿ ಅಭಿವೃದ್ಧಿಯ ಬೀಜ ಬಿತ್ತಿದ್ದಾರೆ. ಅವು ಹೆಮ್ಮರವಾಗಿ ಬೆಳೆದು ಎಲ್ಲರಿಗೂ ಆಸರೆಯಾಗಿವೆ. ಕೇವಲ ರಾಜಕೀಯ ಕಾರಣಕ್ಕಾಗಿ ಇಂತಹ ಕೊಡುಗೆಗಳಿಗೆ ಮಾತಿನ ಕೊಡಲಿ ಪೆಟ್ಟು ನೀಡುವ ಪ್ರಯತ್ನ ಮಾಡಬಾರದು. ಇದು ಎಂದಿಗೂ ಫಲ ನೀಡುವುದಿಲ್ಲ. ಸಾಂವಿಧಾನಿಕ ಹಾಗೂ ಪ್ರಜಾತಂತ್ರದ ಜವಾಬ್ದಾರಿಯುತ ಹುದ್ದೆಯಲ್ಲಿರುವ ಯತೀಂದ್ರ ಅವರಿಗೂ ಮತ್ತು ಮುಖ್ಯಮಂತ್ರಿಯ ಗೌರವಕ್ಕೂ ಇದು ಶ್ರೇಯಸ್ಸು ತರುವುದಿಲ್ಲ ಎಂದು ಯದುವೀರ್ ಒಡೆಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.








