ನವದೆಹಲಿ: ಸಂಸತ್ ಅಧಿವೇಶನದಲ್ಲಿ ‘ಆಪರೇಷನ್ ಸಿಂಧೂರ್’ ಕುರಿತ ಚರ್ಚೆಯು ಕಾಂಗ್ರೆಸ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ನಡುವೆ ತೀವ್ರಗೊಂಡಿದೆ. ಈ ಕುರಿತು ಇಂದು ಸಂಜೆ ಸದನದಲ್ಲಿ ಚರ್ಚೆ ನಡೆಯುತ್ತಿದ್ದಾಗ, ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮಾತನಾಡಲು ಮುಂದಾದಾಗ ಕಾಂಗ್ರೆಸ್ ಸಂಸದರು ಅಡ್ಡಿಪಡಿಸಿದರು.
ಇದರಿಂದ ಕೆರಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ನಿಮಗೆ ನಮ್ಮ ದೇಶದ ವಿದೇಶಾಂಗ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಸಚಿವರ ಮೇಲೆ ನಂಬಿಕೆ ಇಲ್ಲ. ಆದರೆ ಬೇರೆ ಯಾವುದೋ ದೇಶದವರು ಹೇಳಿದ ಮಾತು ನಂಬುತ್ತೀರಿ. ಇದಕ್ಕೆ ನನ್ನ ಆಕ್ಷೇಪವಿದೆ” ಎಂದು ಶಾ ಗುಡುಗಿದರು.
ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರಗಳನ್ನು ಸದನದ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ ಶಾ, “ನಿಮ್ಮ ಪಕ್ಷದಲ್ಲಿ ವಿದೇಶಿಯರ ಮಹತ್ವ ಏನೆಂಬುದು ನನಗೆ ಗೊತ್ತಿದೆ. ಆದರೆ ನಿಮ್ಮ ಪಕ್ಷದ ಆ ಎಲ್ಲಾ ವಿಷಯಗಳನ್ನು ಈ ಸದನದ ಮೇಲೆ ಕೂಡ ಹೇರುವುದು ಸರಿಯಲ್ಲ. ಇದೇ ಕಾರಣಕ್ಕಾಗಿ ನೀವು ವಿರೋಧ ಪಕ್ಷದ ಕುರ್ಚಿಯಲ್ಲಿ ಕುಳಿತಿದ್ದೀರಿ, ಮುಂದಿನ 20 ವರ್ಷವೂ ನೀವು ಅಲ್ಲಿಯೇ ಇರುತ್ತೀರಿ” ಎಂದು ತೀಕ್ಷ್ಣವಾಗಿ ನುಡಿದರು.
ಸಂಸತ್ತಿನಲ್ಲಿ ‘ಆಪರೇಷನ್ ಸಿಂಧೂರ್’ ಕುರಿತು ನಡೆಯುತ್ತಿರುವ ಈ ಬಿಸಿಬಿಸಿ ಚರ್ಚೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?








