ಜೈಪುರ: ರಾಜಸ್ಥಾನದ ರಾಜಕೀಯ ಹೈಡ್ರಾಮಕ್ಕೆ ಇಂದು ಸ್ಪೋಟಕ ತಿರುವು ಸಿಕ್ಕಿದೆ. ಹಾಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಶಾಸಕರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಿಎಂ ಗೆಹ್ಲೋಟ್ ವಿರುದ್ಧ ಬಂಡಾಯ ಸಾರಿ ಕೆಲಸ ಶಾಸಕರೊಂದಿಗೆ ದೆಹಲಿಗೆ ಹಾರಿದ್ದ ಡಿಸಿಎಂ ಸಚಿನ್ ಪೈಲಟ್‍ಗೆ ಭಾರಿ ಮುಖಭಂಗವಾಗಿದೆ.
ಜೈಪುರದ ಮುಖ್ಯಮಂತ್ರಿಗಳ ನಿವಾಸದಲ್ಲಿ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಅಶೋಕ್ ಗೆಹ್ಲೋಟ್ ಪರ 102 ಶಾಸಕರು ಬೆಂಬಲ ಸೂಚಿಸಿದ್ದಾರೆ. ನಿನ್ನೆಯಿಂದ ನಡೆದ ದಿಡೀರ್ ಬೆಳವಣಿಗೆಗಳ ನಂತರ ಸಚಿನ್ ಪೈಲಟ್ ಜತೆ ಗುರುತಿಸಿಕೊಂಡಿದ್ದ ಕೆಲ ಶಾಸಕರೂ ಸಹ ಇಂದು ಗೆಹ್ಲೋಟ್‍ಗೆ ಬೆಂಬಲ ಘೋಷಣೆ ಮಾಡಿದ್ದಾರೆ. ಹೀಗಾಗಿ ಸಚಿನ್ ಪೈಲಟ್ ಬೆಂಬಲಕ್ಕೆ ನಿಂತಿದ್ದ ಶಾಸಕರ ಸಂಖ್ಯೆಯೂ ಕುಸಿದಂತಾಗಿದೆ. 107 ಕಾಂಗ್ರೆಸ್ ಶಾಸಕರ ಪೈಕಿ 102 ಮಂದಿ ಗೆಹ್ಲೋಟ್‍ಗೆ ಜೈ ಎಂದಿರುವುದರಿಂದ ಪೈಲಟ್ ಕೇವಲ ನಾಲ್ವರು ಶಾಸಕರು ಉಳಿದಂತಾಗಿದೆ.
ಪಕ್ಷ ತೊರೆಯಲು ಸಜ್ಜಾಗಿದ್ದ ಪೈಲಟ್
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಸ್ಥಳೀಯ ನಾಯಕರ ವಿರುದ್ಧ ಬಂಡಾಯವೆದ್ದಿದ್ದ ಡಿಸಿಎಂ ಸಚಿನ್ ಪೈಲಟ್, ಕಾಂಗ್ರೆಸ್ ಪಕ್ಷ ತೊರೆಯಲು ನಿರ್ಧರಿಸಿದ್ದರು. ತಮಗೆ 30ಕ್ಕೂ ಹೆಚ್ಚು ಶಾಸಕರ ಬೆಂಬಲವಿದ್ದು, ಅವರೂ ಪಕ್ಷ ತೊರೆಯುವುದಾಗಿ ಸ್ವತಃ ಸಚಿನ್ ಪೈಲಟ್ ತಿಳಿಸಿದ್ದರು.
ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ನಾಯಕರ ವಿರುದ್ಧ ಬಂಡಾಯವೆದ್ದು ಆಪ್ತ ಶಾಸಕರೊಂದಿಗೆ ಬಿಜೆಪಿ ಸೇರುವ ಮೂಲಕ ಕಮಲನಾಥ್ ಸರ್ಕಾರವನ್ನು ಪತನಗೊಳಿಸಿದ್ದಾರೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದೇ ಫಾರ್ಮುಲಾ ರಾಜಸ್ಥಾನದಲ್ಲೂ ವರ್ಕ್‍ಟ್ ಮಾಡಲು ಬಿಜೆಪಿ ನಾಯಕರು ಸಚಿನ್ ಪೈಲಟ್‍ರನ್ನು ಹೈಜಾಕ್ ಮಾಡಿ ಆಪರೇಶನ್ ಕಮಲ ಮಾಡಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.
ಶಾಸಕರು ಹೋಟೆಲ್‍ಗೆ ಶಿಫ್ಟ್
ಶಾಸಕಾಂಗ ಸಭೆಯ ನಂತರ ಎಲ್ಲಾ 102 ಕಾಂಗ್ರೆಸ್ ಶಾಸಕರನ್ನು ಹೋಟೆಲ್‍ಗೆ ಶಿಫ್ಟ್ ಮಾಡಲಾಗಿದೆ. ಜೈಪುರದ ಫೇರ್‍ಮೌಂಟ್ ಪಂಚತಾರಾ ಹೋಟೆಲ್‍ನಲ್ಲಿ 102 ಶಾಸಕರನ್ನು ಕರೆದೊಯ್ಯಲಾಗಿದೆ. ಆಪರೇಶನ್ ಕಮಲ ಭೀತಿಯಿಂದಾಗಿ ಶಾಸಕರನ್ನು ಹೋಟೆಲ್‍ನಲ್ಲಿಡಲಾಗಿದೆ.
ಕೈ ಆಪ್ತರ ಮನೆ ಮೇಲೆ ಐಟಿ ದಾಳಿ
ರಾಜಸ್ಥಾನದಲ್ಲ ಸಚಿನ್ ಪೈಲಟ್ ಸರ್ಕಾರದ ವಿರುದ್ಧ ಬಂಡಾಯ ಸಾರಿದ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಪ್ತರ ಮನೆ ಮೇಲೆ ಐಟಿ ದಾಳಿ ನಡೆದಿದೆ. ಕಾಂಗ್ರೆಸ್ ಶಾಸಕರನ್ನು ಬೆದರಿಸುವ ತಂತ್ರವಾಗಿ ಈ ಐಟಿ ದಾಳಿ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.