ಜಮ್ಮು-ಕಾಶ್ಮೀರದ ಪ್ರಸಿದ್ಧ ತ್ರಿಕೂಟ ಪರ್ವತದ ಮೇಲೆ ಇರುವ ಮಾತಾ ವೈಷ್ಟೋ ದೇವಿ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಇಂದು ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಭಾರೀ ಮಳೆಯಿಂದಾಗಿ ಸಂಭವಿಸಿದ ಭೂಕುಸಿತದಲ್ಲಿ ಕನಿಷ್ಠ ಐವರು ಮೃತಪಟ್ಟಿದ್ದು, 14ಕ್ಕೂ ಹೆಚ್ಚು ಯಾತ್ರಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಧ್ಯಾಹ್ನ ಸುಮಾರು 3 ಗಂಟೆ ಸುಮಾರಿಗೆ ಅರಿಯ ಬಳಿ ಇರುವ ಇಂದ್ರಪ್ರಸ್ಥ ಭೋಜನಾಲಯದ ಹತ್ತಿರ ಈ ದುರಂತ ಸಂಭವಿಸಿದೆ. ಆ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಯಾತ್ರಿಕರು ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಅಕಸ್ಮಾತ್ ಪರ್ವತದಿಂದ ಬಿದ್ದ ಬಂಡೆಗಳು ಮತ್ತು ಮಣ್ಣು ಯಾತ್ರಿಕರ ಮೇಲೆ ಬಿದ್ದು ಈ ಅನಾಹುತಕ್ಕೆ ಕಾರಣವಾಗಿದೆ.
ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಸ್ಥಳದಲ್ಲಿ ಅಗತ್ಯ ರಕ್ಷಣಾ ಕಾರ್ಯಾಚರಣೆಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದು, ಹೆಚ್ಚಿನ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಭದ್ರತಾ ಪಡೆಗಳು ಶ್ರಮಿಸುತ್ತಿವೆ.
ಈ ದುರ್ಘಟನೆ ವೈಷ್ಟೋ ದೇವಿ ಯಾತ್ರಿಕರಲ್ಲಿ ಆತಂಕ ಮೂಡಿಸಿದ್ದು, ಅಧಿಕಾರಿಗಳು ಮುಂದಿನ ಯಾತ್ರಿಕರ ಸುರಕ್ಷತೆಗೆ ವಿಶೇಷ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.








