ಬಚ್ಚನ್ ಕುಟುಂಬದ ಆರೋಗ್ಯ ವಿಚಾರಿಸಲು ಹೋಗಿ ಟ್ರೋಲ್ ಆದ ಜೂಹಿ
ಮುಂಬೈ, ಜುಲೈ 14: ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ ಬಚ್ಚನ್ ಮತ್ತು ಆರಾಧ್ಯ ರೈ ಬಚ್ಚನ್ ಗೆ ಕೊರೊನಾ ಸೋಂಕು ದೃಢಪಟ್ಟ ಬಳಿಕ ಬಾಲಿವುಡ್ ನ ನಟ-ನಟಿಯರು, ಅಭಿಮಾನಿ ವರ್ಗ ಬೇಗನೆ ಗುಣಮುಖರಾಗಿ ಎಂದು ಹಾರೈಸುತ್ತಿದ್ದಾರೆ. ಈ ನಡುವೆ ಬಾಲಿವುಡ್ ನಟಿ ಜೂಹಿ ಚಾವ್ಲಾ ಅಮಿತಾಬ್ ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರ ಆರೋಗ್ಯ ವಿಚಾರಿಸಲು ಟ್ವೀಟ್ ಮಾಡಿ ಟ್ರೋಲ್ ಆದರು.
ಶನಿವಾರ ರಾತ್ರಿ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರೆ, ಭಾನುವಾರ ಐಶ್ವರ್ಯಾ ರೈ ಬಚ್ಚನ್ ಮತ್ತು ಅವರ ಪುತ್ರಿ ಆರಾಧ್ಯ ಅವರಿಗೂ ಕೊರೋನಾವೈರಸ್ ತಗುಲಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜೂಹಿ ಚಾವ್ಲಾ ಅವರು ಬಚ್ಚನ್ ಮತ್ತು ಅವರ ಕುಟುಂಬದ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಾ ಟ್ವೀಟ್ ಮಾಡಿದ್ದಾರೆ.

ಅಮಿತ್ ಜೀ… ಅಭಿಷೇಕ್ ಜೀ… ಆಯುರ್ವೇದ ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ನೋಡುತ್ತಿರಿ ಎಂದು ಜೂಹಿ ಚಾವ್ಲಾ ಟ್ವೀಟ್ ಮಾಡಿದ್ದಾರೆ. ಆರಾಧ್ಯ ಎಂದು ಬರೆಯುವ ಬದಲು ಆಯುರ್ವೇದ ಎಂದು ಬರೆದು ಟ್ರೋಲ್ ಆದ ಜೂಹಿ ಚಾವ್ಲಾ ಬಳಿಕ ಹಳೆಯ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಮತ್ತೊಂದು ಟ್ವೀಟ್ ಅನ್ನು ಮಾಡಿ ಅದರಲ್ಲಿ ಅಮಿತ್ ಜಿ, ಅಭಿಷೇಕ್, ಐಶ್ವರ್ಯ ಮತ್ತು ಆರಾಧ್ಯ ನೀವೆಲ್ಲರೂ ಆದಷ್ಟು ಬೇಗನೆ ಗುಣಮುಖರಾಗಿ ಎಂದು ಪ್ರಾರ್ಥಿಸುತ್ತೇನೆ.ನಾನು ಈ ಹಿಂದಿನ ಟ್ವೀಟ್ ನಲ್ಲಿ ಆಯುರ್ವೇದ ಎಂದು ಬರೆದಿದ್ದೆ. ಅದರಲ್ಲಿ ತಪ್ಪೇನು ಇಲ್ಲ. ಪ್ರಕೃತಿ ನಿಮ್ಮೆಲ್ಲರನ್ನೂ ಶೀಘ್ರವಾಗಿ ಗುಣಪಡಿಸುತ್ತದೆ ಎನ್ನುವುದು ಅದರ ಅರ್ಥ ಎಂದು ಬರೆದಿದ್ದಾರೆ.

ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್ ಇಬ್ಬರೂ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನಾವತಿ ಆಸ್ಪತ್ರೆ ನೀಡಿರುವ ಹೆಲ್ತ್ ಅಪ್ಡೇಟ್ ನಲ್ಲಿ ಅಮಿತಾಬ್ ಬಚ್ಚನ್ ಅವರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಅವರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಮಾಹಿತಿ ನೀಡಿದೆ.








