ಬೆಂಗಳೂರು: ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು (FDA) ಕಳಪೆ ಗುಣಮಟ್ಟದವೆಂದು ಪರಿಗಣಿಸಲಾದ ಎಂಟು ವಿವಿಧ ಔಷಧ ಮತ್ತು ಕಾಂತಿವರ್ಧಕಗಳ (cosmetics) ಬಳಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ. ಇವುಗಳ ಮಾರಾಟ, ದಾಸ್ತಾನು ಮತ್ತು ಬಳಕೆ ಸಂಪೂರ್ಣ ನಿಷಿದ್ಧವೆಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಲಭ್ಯವಾಗಿರುವ ಮಾಹಿತಿ ಪ್ರಕಾರ, ಈ ಮಾತ್ರೆಗಳು ನಿರೀಕ್ಷಿತ ಗುಣಮಟ್ಟವನ್ನು ಪೂರೈಸುತ್ತಿಲ್ಲ, ಹಾಗಾಗಿ ಅವುಗಳ ಬಳಕೆಯಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗಬಹುದು. ಆದ್ದರಿಂದ, ಎಲ್ಲಾ ಔಷಧ ವ್ಯಾಪಾರಿಗಳು, ವೈದ್ಯರು, ಆಸ್ಪತ್ರೆಗಳು ಮತ್ತು ಸಾರ್ವಜನಿಕರು ಈ ಉತ್ಪನ್ನಗಳನ್ನು ಬಳಸದಂತೆ ಎಚ್ಚರಿಕೆ ವಹಿಸಬೇಕು.
ಯಾವೆಲ್ಲಾ ಉತ್ಪನ್ನಗಳು ನಿಷಿದ್ಧ?
* ಹೆಲ್ತಿ ಲೈಫ್ ಫಾರ್ಮಾ ಪ್ರೈ. ಲಿಮಿಟೆಡ್: ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ
* ಭವ್ಯ ಇಂಡಸ್ಟ್ರೀಸ್: ಆಕ್ಟಿವ್ ಅಲೋವೆರಾ ಮತ್ತು ನಿಮ್ ಸೋಪ್
* ರಾಜ್ದೀಪ್ ಫಾರ್ಮಸ್ಯೂಟಿಕಲ್ಸ್: ಲೈಫೋಜೆಸಿಕ್
* ಮೈಕ್ರೋ ಫಾರ್ಮುಲೇಷನ್ಸ್: ಅಮೋಕ್ಸಿಲಿನ್ ಮತ್ತು ಪೊಟ್ಯಾಷಿಯಂ ಕ್ಲಾವುಲನೇಟ್ ಟ್ಯಾಬ್ಲೆಟ್ಸ್ ಐಪಿ
* ಫಾರ್ಮಾಕೇರ್: ಮೆಗ್ನೀಷಿಯಂ ಸಲ್ಫೇಟ್ ಪಾಸ್ಫೇಟ್ ಬಿಪಿ
* ಡ್ಯಾಫೋಹಿಲ್ಸ್ ಲ್ಯಾಬೋರೇಟರೀಸ್ ಪ್ರೈ. ಲಿಮಿಟೆಡ್: ಅಡಾಲ್ಪ್ಮಾಮ್ ಎಂಆರ್
* ಮೆಡಿಸಿಸ್ ಬಯೋಟೆಕ್ ಪ್ರೈ. ಲಿಮಿಟೆಡ್: ಫೆರೋಸ್ ಅಸ್ಕ್ರೋಬೇಟ್, ಫಾಲಿಕ್ ಆಸಿಡ್ ಮತ್ತು ಜಿಂಕ್ ಸಲ್ಫೇಟ್ ಟ್ಯಾಬ್ಲೆಟ್ಸ್ (ಆಲ್ಟೋಫರ್-ಎಕ್ಸ್ ಟಿ ಟ್ಯಾಬ್ಲೆಟ್ಸ್)
ದಾಸ್ತಾನು ಹೊಂದಿದ್ದರೆ ಏನು ಮಾಡಬೇಕು?
ಯಾರಾದರೂ ಈ ನಿಷಿದ್ಧ ಔಷಧಿಗಳನ್ನು ಸಂಗ್ರಹಿಸಿಟ್ಟಿದ್ದರೆ, ಕೂಡಲೇ ಸಂಬಂಧಪಟ್ಟ ಇಲಾಖೆಯ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರಬೇಕು ಎಂದು ಇಲಾಖೆ ಸೂಚನೆ ನೀಡಿದೆ. ಈ ಕ್ರಮವು ಕಳಪೆ ಗುಣಮಟ್ಟದ ಔಷಧಿಗಳಿಂದ ಸಾರ್ವಜನಿಕರ ಆರೋಗ್ಯವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ, ನೀವು ಹತ್ತಿರದ ಎಫ್ಡಿಎ ಕಚೇರಿಯನ್ನು ಸಂಪರ್ಕಿಸಬಹುದು.








