ಬೆಂಗಳೂರು, ಧರ್ಮಸ್ಥಳ: ಧರ್ಮಸ್ಥಳ ಪ್ರಕರಣದಲ್ಲಿ ಹೊಸ ತಿರುವುಗಳು ಹೊರಬಿದ್ದಿದ್ದು, “ಬುರುಡೆ ಗ್ಯಾಂಗ್”ನ ಕರಾಮತ್ತು ಒಂದೊಂದಾಗಿ ಬಯಲಾಗಿದೆ. ಎಸ್ಐಟಿ ತನಿಖೆ ವೇಳೆ ಚಿನ್ನಯ್ಯ ನೀಡಿರುವ ಹೇಳಿಕೆಗಳು ಈ ಪ್ರಕರಣದ ಹಿಂದಿನ ದೊಡ್ಡ ಷಡ್ಯಂತ್ರವನ್ನು ಅನಾವರಣಗೊಳಿಸಿವೆ.
ಹೇಗೆ ಆರಂಭವಾಯಿತು ಬುರುಡೆ ನಾಟಕ?
ಈ ಪ್ರಕರಣದ ಪ್ರಮುಖ ಪಾತ್ರಧಾರಿ ಚಿನ್ನಯ್ಯ, ತನಿಖೆ ವೇಳೆ ಕೆಲವು ಆಘಾತಕಾರಿ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ. ‘ನೂರಾರು ಶವಗಳನ್ನು ಹೂತಿದ್ದೇನೆ’ ಎಂದು ಅವನು ಹೇಳಿಕೆ ನೀಡುವ ಮುನ್ನ, ಬೆಂಗಳೂರಿನ ಬಾಗಲುಗುಂಟೆಯಲ್ಲಿರುವ ಜಯಂತ್ ನಿವಾಸದಲ್ಲಿ ಈ ಕುರಿತು ‘ರಿಹರ್ಸಲ್’ ನಡೆದಿತ್ತು. ಈ ನಾಟಕಕ್ಕೆ ಬೇಕಾದ ಬುರುಡೆ ಮತ್ತು ಮೂಳೆಗಳನ್ನು ಜಯಂತ್ ನೀಡಿದ್ದ ಎಂದು ಚಿನ್ನಯ್ಯ ಎಸ್ಐಟಿ ಮುಂದೆ ಬಾಯ್ಬಿಟ್ಟಿದ್ದಾನೆ.
ಜಯಂತ್ ನಿವಾಸದಲ್ಲಿ ರಿಹರ್ಸಲ್ ವಿಡಿಯೋ ರೆಕಾರ್ಡ್!
ತನ್ನ ಹೇಳಿಕೆಗಳನ್ನು ಮೊದಲು ಜಯಂತ್ ಮನೆಯಲ್ಲಿ ವಿಡಿಯೋ ಮಾಡಲಾಗಿತ್ತು ಎಂದು ಚಿನ್ನಯ್ಯ ತಿಳಿಸಿದ್ದಾನೆ. ನಂತರ, ಗಿರೀಶ್ ಮಟ್ಟಣ್ಣನವರ್ ಸೂಚನೆಯಂತೆ ಆ ವಿಡಿಯೋವನ್ನು ಜಯಂತ್ ಡಿಲೀಟ್ ಮಾಡಿದ್ದ ಎನ್ನಲಾಗಿದೆ. ಪೊಲೀಸರು ಈ ವಿಡಿಯೋವನ್ನು ಪತ್ತೆಹಚ್ಚಲು, ಜಪ್ತಿ ಮಾಡಿರುವ ಫೋನ್ಗಳಿಂದ ಡೇಟಾ ರಿಟ್ರೀವ್ ಮಾಡುವ ಕೆಲಸ ಮಾಡುತ್ತಿದ್ದಾರೆ.
ಬುರುಡೆ ಪ್ಲಾನ್ ಎರಡು ವರ್ಷಗಳ ಹಿಂದಿನದ್ದಾ?
ಬುರುಡೆ ನಾಟಕದ ಸಂಚು ಸುಮಾರು ಎರಡು ವರ್ಷಗಳ ಹಿಂದೆಯೇ ಶುರುವಾಗಿತ್ತು ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಬಳಸಿದ ಬುರುಡೆ ನಾಟಕಕ್ಕೆ ಧರ್ಮಸ್ಥಳದ ಬಂಗ್ಲೆಗುಡ್ಡ ಮತ್ತು ನೇತ್ರಾವತಿ ನದಿ ತೀರದಲ್ಲಿ ಗ್ಯಾಂಗ್ ರಿಹರ್ಸಲ್ ಮಾಡಿತ್ತು. ನಕ್ಷೆ ತಯಾರಿಸಿಕೊಂಡು, ಶವ ಹೂಳಲು 30ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಲಾಗಿತ್ತು. ಕನ್ಯಾಡಿ ಮತ್ತು ಬೋಳಿಯಾರು ಭಾಗದಲ್ಲಿಯೂ ಈ ಪ್ಲಾನ್ ನಡೆಯುವ ಸಾಧ್ಯತೆ ಇತ್ತು.
ದೇಶಾದ್ಯಂತ ಹರಡಿದ ನಂಟು!
ಈ ಪ್ರಕರಣದಲ್ಲಿನ ಬುರುಡೆ ಗ್ಯಾಂಗ್ನ ಸಂಪರ್ಕಗಳು ದೆಹಲಿ ಮತ್ತು ತಮಿಳುನಾಡಿನವರೆಗೂ ಬೆಸೆದುಕೊಂಡಿವೆ. ಈ ಹಿನ್ನೆಲೆಯಲ್ಲಿ, ಹೆಚ್ಚಿನ ವಿಚಾರಣೆಗಾಗಿ ಚಿನ್ನಯ್ಯನನ್ನು ಇನ್ನಷ್ಟು ದಿನಗಳ ಕಾಲ ವಶಕ್ಕೆ ಪಡೆಯುವ ಸಾಧ್ಯತೆ ಇದೆ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.
ಈ ಪ್ರಕರಣದ ಕುರಿತು ಮುಂದಿನ ದಿನಗಳಲ್ಲಿ ಇನ್ನಷ್ಟು ಸ್ಫೋಟಕ ಸಂಗತಿಗಳು ಹೊರಬೀಳುವ ಸಾಧ್ಯತೆ ಇದೆ.








