ಬೆಂಗಳೂರು: ಶಿಕ್ಷಣ ನಮ್ಮ ಸರ್ಕಾರದ ಆದ್ಯತೆಯಾಗಿದ್ದು, ಅದಕ್ಕಾಗಿ ವಾರ್ಷಿಕ ₹65 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಮಾತನಾಡಿದ ಅವರು, ಶಿಕ್ಷಣ ಮತ್ತು ಸಾಮಾಜಿಕ ಪರಿವರ್ತನೆಗೆ ಸಂಬಂಧಿಸಿದಂತೆ ಕೆಲವು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದರು.
ಮೌಲ್ಯ ಶಿಕ್ಷಣದತ್ತ ಒತ್ತು:
ಮಕ್ಕಳು ಮೊಬೈಲ್ ಗೀಳಿನಿಂದ ಹೊರಬರಲು ‘ಮೊಬೈಲ್ ಬಿಡಿ-ಪುಸ್ತಕ ಹಿಡಿ’ ಎಂಬ ಮೌಲ್ಯವನ್ನು ಪ್ರತಿಯೊಂದು ಶಾಲೆ ಮತ್ತು ಮನೆಯಲ್ಲಿ ಜಾರಿಗೊಳಿಸಬೇಕು ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು. ಕೇವಲ ಪಾಠ ಹೇಳಿಕೊಡುವುದು ಶಿಕ್ಷಣವಲ್ಲ, ಬದಲಿಗೆ ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದು ಮತ್ತು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರೂಪಿಸುವುದು ಶಿಕ್ಷಣದ ಮುಖ್ಯ ಉದ್ದೇಶ ಎಂದು ಅವರು ತಿಳಿಸಿದರು.
ವೈಚಾರಿಕತೆ ಮತ್ತು ಮೌಢ್ಯದ ವಿರುದ್ಧ:
ಸಮಾಜದಲ್ಲಿರುವ ಜಾತಿ ವ್ಯವಸ್ಥೆ ಮತ್ತು ಮೌಢ್ಯದ ಬಗ್ಗೆ ಮಾತನಾಡಿದ ಸಿಎಂ, ವಿದ್ಯಾವಂತರು ಕೂಡ ಜಾತಿ ಆಚರಣೆ ಮತ್ತು ಮೌಢ್ಯಗಳನ್ನು ನಂಬುವುದು ಶಿಕ್ಷಣಕ್ಕೆ ಮಾಡುವ ದ್ರೋಹ ಎಂದರು. ವೈದ್ಯರು, ಪ್ರಾಧ್ಯಾಪಕರು, ಮತ್ತು ಎಂಜಿನಿಯರ್‌ಗಳು ಹಣೆಬರಹ ನಂಬಿರುವುದನ್ನು ನಾನು ನೋಡಿದ್ದೇನೆ. ಈ ರೀತಿ ಮೌಢ್ಯಗಳನ್ನು ನಂಬಿ ಜಾತಿ ಮಾಡುವುದಾದರೆ, ಅವರು ಪಡೆದ ಶಿಕ್ಷಣ ಎಂಥದ್ದು ಎಂದು ಪ್ರಶ್ನಿಸಿದರು. ಶಿಕ್ಷಕರು ವೈಚಾರಿಕತೆ, ವೈಜ್ಞಾನಿಕತೆ ಮತ್ತು ಪರಧರ್ಮ ಸಹಿಷ್ಣುತೆಯನ್ನು ಮಕ್ಕಳಿಗೆ ಕಲಿಸುವ ನೈತಿಕ ಹೊಣೆಗಾರಿಕೆ ಹೊಂದಿದ್ದಾರೆ ಎಂದು ಹೇಳಿದರು.
ಸಂವಿಧಾನದ ಮೌಲ್ಯಗಳತ್ತ ಗಮನ:
ಸಂವಿಧಾನದ ಪೀಠಿಕೆಯನ್ನು ಅರ್ಥೈಸುವ ಕೆಲಸ ಮಾಡಬೇಕು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾನವೀಯತೆ ಹೊಂದಿರುವ ಅತ್ಯುನ್ನತ ನಾಗರಿಕರನ್ನು ಸೃಷ್ಟಿಸಬಹುದು ಎಂದು ತಿಳಿಸಿದರು. ಹಿಂದಿನ ದಿನಗಳಲ್ಲಿ ಶೂದ್ರರಿಗೆ ಮತ್ತು ಮಹಿಳೆಯರಿಗೆ ಶಿಕ್ಷಣದ ಅವಕಾಶ ಇರಲಿಲ್ಲ. ಆದರೆ, ಈಗ ಶಿಕ್ಷಣದ ಹಕ್ಕಿನಿಂದಾಗಿ ಹೆಚ್ಚು ಹೆಣ್ಣು ಮಕ್ಕಳು ರ‍್ಯಾಂಕ್ ಪಡೆಯುತ್ತಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅನ್ನಭಾಗ್ಯದ ಹಿನ್ನೆಲೆ:
ತಮ್ಮ ವಿದ್ಯಾರ್ಥಿ ಜೀವನದಲ್ಲಿ ಪ್ರತಿದಿನ ಅನ್ನ ತಿನ್ನುವ ಶಕ್ತಿ ಇರಲಿಲ್ಲ. ಯಾರಿಗೂ ಆ ಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದೇನೆ ಎಂದು ಸಿಎಂ ವಿವರಿಸಿದರು. ಶಿಕ್ಷಕರು ಮಕ್ಕಳ ಮೇಲೆ ದೊಡ್ಡ ಪ್ರಭಾವ ಬೀರುವುದರಿಂದ ಅವರು ಅತ್ಯುನ್ನತ ಮಾನವೀಯ ಮತ್ತು ನಾಗರಿಕ ಮೌಲ್ಯಗಳನ್ನು ಪಾಲಿಸಬೇಕು ಎಂದು ಕಿವಿಮಾತು ಹೇಳಿದರು.








