ದೇಶಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣದ (Dharmasthala Soujanya Case) ಹೊಸ ಆಯಾಮವಾದ ‘ಬುರುಡೆ ಪ್ರಕರಣ’ದಲ್ಲಿ (Burude Case) ಎಸ್ಐಟಿ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಸಾಮಾಜಿಕ ಹೋರಾಟಗಾರ ಗಿರೀಶ್ ಮಟ್ಟಣ್ಣನವರ್ (Girish Mattannavar) ಅವರನ್ನು ವಿಚಾರಣೆಗೊಳಪಡಿಸಿದಾಗ, ಪ್ರಕರಣದಲ್ಲಿ ಸೌಜನ್ಯ ಅವರ ಸಂಬಂಧಿ ವಿಠ್ಠಲ್ ಗೌಡ (Vithal Gowda) ಅವರ ಪಾತ್ರ ಬಯಲಾಗಿದೆ.
ಬುರುಡೆ ಸಿಕ್ಕಿದ್ದು ವಿಠ್ಠಲ್ ಗೌಡ ಅವರಿಂದಲೇ: ಗಿರೀಶ್ ಮಟ್ಟಣ್ಣನವರ್ ಹೇಳಿಕೆ
ಬುರುಡೆ ಎಲ್ಲಿಂದ ಬಂತು ಎಂಬ ಎಸ್ಐಟಿ ಪ್ರಶ್ನೆಗೆ ಗಿರೀಶ್ ಮಟ್ಟಣ್ಣನವರ್ ಅವರು ಅಂತಿಮವಾಗಿ ಮೌನ ಮುರಿದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಬುರುಡೆಯನ್ನು ತಮಗೆ ಸೌಜನ್ಯ ಅವರ ಮಾವ ವಿಠ್ಠಲ್ ಗೌಡರೇ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ. ಇದಲ್ಲದೆ, ಈ ಬುರುಡೆ ಮಾಸ್ಕ್ಮ್ಯಾನ್ ಚಿನ್ನಯ್ಯ (Maskman Chinnayya) ತೋರಿಸಿದ್ದ 11A ಸ್ಥಳದಿಂದ ಸ್ವಲ್ಪ ದೂರದಲ್ಲಿರುವ ಬಂಗ್ಲೆಗುಡ್ಡ ಕಾಡಿನಿಂದ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹೇಳಿಕೆ ಎಸ್ಐಟಿ ಅಧಿಕಾರಿಗಳನ್ನೂ ಆಶ್ಚರ್ಯಗೊಳಿಸಿದೆ.
ವಿಠ್ಠಲ್ ಗೌಡ ಮತ್ತು ಚಿನ್ನಯ್ಯ ನಡುವಿನ ಸಂಬಂಧ
ವಿಚಾರಣೆ ವೇಳೆ ಮತ್ತಷ್ಟು ಮಾಹಿತಿ ಹೊರಬಿದ್ದಿದ್ದು, ವಿಠ್ಠಲ್ ಗೌಡ ಮತ್ತು ಮಾಸ್ಕ್ಮ್ಯಾನ್ ಚಿನ್ನಯ್ಯ ಹಲವು ವರ್ಷಗಳಿಂದ ಪರಿಚಿತರು ಎಂಬುದು ತಿಳಿದುಬಂದಿದೆ. ಚಿನ್ನಯ್ಯ ಉಜಿರೆಯಲ್ಲಿ ಕೆಲಸ ಮಾಡುತ್ತಿದ್ದಾಗ, ಅನಾಥ ಶವಗಳನ್ನು ಕಾನೂನುಬದ್ಧವಾಗಿ ಹೂಳುವ ವಿಚಾರ ವಿಠ್ಠಲ್ ಗೌಡ ಅವರಿಗೆ ಗೊತ್ತಾಗಿತ್ತು. ಇದೇ ಮಾಹಿತಿಯನ್ನು ಬಳಸಿಕೊಂಡು, ವಿಠ್ಠಲ್ ಗೌಡರು ಚಿನ್ನಯ್ಯನನ್ನು ತಮ್ಮ ಗ್ಯಾಂಗ್ಗೆ ಪರಿಚಯಿಸಿದ್ದರು ಎಂದು ಹೇಳಲಾಗಿದೆ. ಈ ಇಬ್ಬರು ಸೇರಿಕೊಂಡು ಬುರುಡೆ ಕಥೆ ಸೃಷ್ಟಿಸಿರುವ ಆರೋಪವೂ ಕೇಳಿಬಂದಿದೆ.
ಅಸ್ಥಿಪಂಜರಕ್ಕಾಗಿ ತೀವ್ರ ಶೋಧ
ಗಿರೀಶ್ ಮಟ್ಟಣ್ಣನವರ್ ಅವರ ಹೇಳಿಕೆ ನಂತರ, ಎಸ್ಐಟಿ ವಿಠ್ಠಲ್ ಗೌಡ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ. ವಿಚಾರಣೆ ವೇಳೆ, ತನಗೆ ಮರದ ಬುಡದಲ್ಲಿ ಬುರುಡೆ ಮಾತ್ರ ಸಿಕ್ಕಿದ್ದು ಎಂದು ವಿಠ್ಠಲ್ ಗೌಡ ಹೇಳಿದ್ದಾರೆ. ಈ ಹೇಳಿಕೆ ಆಧಾರದ ಮೇಲೆ, ಅಸ್ಥಿಪಂಜರ ಸಿಗುವ ಸಾಧ್ಯತೆಗಳಿರುವುದರಿಂದ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡ ಕಾಡಿನಲ್ಲಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬುರುಡೆ ಯಾವಾಗ ಬಂತು?
ತನಿಖೆ ವೇಳೆ ತಿಳಿದುಬಂದ ಮತ್ತೊಂದು ಮುಖ್ಯ ಅಂಶವೆಂದರೆ, ಈ ಬುರುಡೆಯನ್ನು ಸುಮಾರು ಒಂದು ವರ್ಷದ ಹಿಂದೆ, ಕಳೆದ ಮಳೆಗಾಲದ ಸಮಯದಲ್ಲಿ ಬಂಗ್ಲೆಗುಡ್ಡ ಬಳಿಯಿಂದ ತರಲಾಗಿದೆ. ಅಂದಿನಿಂದ ಒಂದು ವರ್ಷಗಳ ಕಾಲ ಈ ಬುರುಡೆ ಗ್ಯಾಂಗ್ ಬಳಿಯೇ ಇತ್ತು ಎಂದು ಎಸ್ಐಟಿ ಹೇಳಿದೆ.
ಈ ಪ್ರಕರಣದ ವಿಚಾರಣೆಯನ್ನು ಎಸ್ಐಟಿ ಗಂಭೀರವಾಗಿ ಮುಂದುವರಿಸಿದೆ. ಜಯಂತ್ ಮತ್ತು ಮಟ್ಟಣ್ಣನವರ್ ಅವರನ್ನು ಹಲವು ದಿನಗಳಿಂದ ವಿಚಾರಣೆ ನಡೆಸಲಾಗುತ್ತಿದ್ದು, ವಿಠ್ಠಲ್ ಗೌಡರನ್ನು ಕೂಡ ಎಸ್ಐಟಿ ಠಾಣೆಯಲ್ಲಿ ಇರಿಸಿಕೊಂಡು ಪ್ರಶ್ನಿಸಲಾಗುತ್ತಿದೆ. ಈ ಹೊಸ ಬೆಳವಣಿಗೆಗಳು ಪ್ರಕರಣಕ್ಕೆ ಮತ್ತಷ್ಟು ಗಂಭೀರ ಸ್ವರೂಪ ನೀಡಿವೆ.








