ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಎಐ-ಚಾಲಿತ ವಿಡಿಯೋಗಳ ಮೂಲಕ ಗಂಭೀರ ಆರೋಪಗಳನ್ನು ಮಾಡಿ ವಿವಾದದ ಕೇಂದ್ರಬಿಂದುವಾಗಿರುವ ಯೂಟ್ಯೂಬರ್ ಸಮೀರ್ ಎಂ.ಡಿ, ಇದೀಗ ಮತ್ತೊಂದು ವಿಡಿಯೋ ಮೂಲಕ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪೊಲೀಸ್ ತನಿಖೆ, ವೈಯಕ್ತಿಕ ಸಂಕಷ್ಟಗಳು ಮತ್ತು ತಮ್ಮ ಜೊತೆಗಿದ್ದವರಿಂದಲೇ ಆದ ಮೋಸದ ಬಗ್ಗೆ ಮಾತನಾಡಿದ್ದು, “ನನ್ನ ಜೊತೆಯಲ್ಲಿದ್ದವರೇ ಉಲ್ಟಾ ಹೊಡೆದಿದ್ದಾರೆ,” ಎಂದು ನೋವು ವ್ಯಕ್ತಪಡಿಸಿದ್ದಾರೆ.
ಬೆಳ್ತಂಗಡಿ ಪೊಲೀಸರಿಂದ ನಿರಂತರ ವಿಚಾರಣೆ ಎದುರಿಸುತ್ತಿರುವ ಸಮೀರ್, ತನಿಖೆಯ ಬಳಿಕ ತಮ್ಮ ಜೀವನವೇ ತಲೆಕೆಳಗಾಗಿದೆ ಎಂದು ಹೇಳಿಕೊಂಡಿದ್ದಾರೆ. ಈ ಹಿಂದೆ ಸ್ಟುಡಿಯೋದಲ್ಲಿ ಕುಳಿತು ವೀಡಿಯೋ ಮಾಡುತ್ತಿದ್ದ ತಾವು, ಇಂದು ಕಾರಿನಲ್ಲಿ ಕುಳಿತು ಮಾತನಾಡುವ ಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
“ಬೀದಿಗೆ ಬಂದಿದ್ದೇನೆ, ಬಾಡಿಗೆ ಮನೆ ಸಿಗುತ್ತಿಲ್ಲ”
ಪೊಲೀಸರು ವಿಚಾರಣೆಗಾಗಿ ತಾವು ವಾಸವಿದ್ದ ಬಾಡಿಗೆ ಮನೆಗೆ ಬಂದ ನಂತರ, ಮನೆಯ ಮಾಲೀಕರು ತಮ್ಮನ್ನು ಖಾಲಿ ಮಾಡಿಸಿದ್ದಾರೆ ಎಂದು ಸಮೀರ್ ಆರೋಪಿಸಿದ್ದಾರೆ. “ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ, ಇಂದು ನನಗೆ ಇರಲು ಮನೆಯಿಲ್ಲ. ‘ಸಮೀರ್ ಎಂ.ಡಿ’ ಎಂದರೆ ಯಾರು ಕೂಡ ಬಾಡಿಗೆ ಮನೆ ನೀಡಲು ಮುಂದೆ ಬರುತ್ತಿಲ್ಲ. ನನ್ನಿಂದಾಗಿ ನನ್ನ ಕುಟುಂಬ ಬೀದಿಗೆ ಬಂದಿದೆ,” ಎಂದು ಅವರು ಕಣ್ಣೀರು ಹಾಕಿದ್ದಾರೆ.
ವಿದೇಶಿ ಫಂಡಿಂಗ್ ಆರೋಪಕ್ಕೆ ಸ್ಪಷ್ಟನೆ
ತಮ್ಮ ವಿರುದ್ಧ ಕೇಳಿಬಂದಿರುವ ವಿದೇಶಿ ಫಂಡಿಂಗ್ ಆರೋಪವನ್ನು ಸಮೀರ್ ತಳ್ಳಿಹಾಕಿದ್ದಾರೆ. “ನನಗೆ ಯಾವುದೇ ವಿದೇಶದಿಂದ ಹಣ ಬಂದಿಲ್ಲ. ಒಂದು ವೇಳೆ ನಾನು ಹಣ ಪಡೆದಿದ್ದರೆ, ಅದು ತನಿಖೆಯಿಂದ ಹೊರಬರುತ್ತಿತ್ತು. ನನ್ನ ಎಲ್ಲಾ ಬ್ಯಾಂಕ್ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದೇನೆ. ತನಿಖೆ ನಡೆಯಲಿ, ನಾನು ಯಾವುದೇ ತಪ್ಪು ಮಾಡಿಲ್ಲ. ಆದರೆ, ನನ್ನ ಮೇಲೆ ಸುಳ್ಳು ಆರೋಪ ಮಾಡುವವರನ್ನು ಯಾರೂ ಪ್ರಶ್ನಿಸುವುದಿಲ್ಲ,” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಆ ತಾಯಿಯ ಕಣ್ಣೀರು ಸುಳ್ಳೇ?”
ಸುಜಾತ ಭಟ್ ಅವರ ತಾಯಿಯ ಕಣ್ಣೀರನ್ನು ನೋಡಿ ನಾನು ವಿಡಿಯೋ ಮಾಡಿದ್ದೆ. ಆ ತಾಯಿಯ ನೋವಿಗೆ ಧ್ವನಿಯಾಗಬೇಕೆಂದು ಬಯಸಿದ್ದೆ. ಈಗ ಆ ಕಣ್ಣೀರೇ ಸುಳ್ಳು ಎಂದರೆ ನಾನೇನು ಮಾಡಲು ಸಾಧ್ಯ? ನನ್ನ ವಿಡಿಯೋ ಸುಳ್ಳು ಎನ್ನುತ್ತಿದ್ದಾರೆ. ಹಾಗಾದರೆ, ಸೌಜನ್ಯಾ ಮತ್ತು ಪದ್ಮಾಲತಾ ಅವರನ್ನು ಕೊಂದಿದ್ದು ಯಾರು? ಪೊಲೀಸರ ಯುಡಿಆರ್ (ಅಸ್ವಾಭಾವಿಕ ಮರಣ) ವರದಿ ಸುಳ್ಳೇ?” ಎಂದು ಸಮೀರ್ ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ.
ಸಮೀರ್ ಸೇರಿದಂತೆ ಐವರ ವಿರುದ್ಧ ಹೊಸ ದೂರು
ಈ ಎಲ್ಲಾ ಬೆಳವಣಿಗೆಗಳ ನಡುವೆ, ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಸಮೀರ್ ಎಂ.ಡಿ, ‘ಮ್ಯಾಜಿಕ್ ಅಜ್ಜಿ’ ಖ್ಯಾತಿಯ ಸುಜಾತಾ ಭಟ್, ‘ಬುರುಡೆ ಮ್ಯಾನ್’ ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ಅವರ ವಿರುದ್ಧ ಹೊಸದಾಗಿ ದೂರು ದಾಖಲಾಗಿದೆ. ಇದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದ್ದು, ತನಿಖೆಯ ದಿಕ್ಕು ಏನಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.








