ಬೆಂಗಳೂರು: ರಾಜ್ಯದಲ್ಲಿ ಜಾತಿ ಗಣತಿ ವಿಚಾರ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಧರ್ಮ ಮತ್ತು ಜಾತಿ ನಮೂದಿಸುವ ಬಗ್ಗೆ ತೀವ್ರ ಚರ್ಚೆಗಳು ನಡೆಯುತ್ತಿವೆ. ಈ ಸಮಯದಲ್ಲಿ ಬೆಂಕಿಗೆ ತುಪ್ಪ ಸುರಿಯುವಂತೆ, ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, “ನಾನು ಹಿಂದೂ ಎಂದು ಹಾಕುವುದಿಲ್ಲ, ಏಕೆಂದರೆ ಹಿಂದೂ ಎನ್ನುವುದೇ ಒಂದು ಧರ್ಮವಲ್ಲ,” ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
“ಹಿಂದೂ-ಲಿಂಗಾಯತ ಧರ್ಮವಲ್ಲ, ಅದೊಂದು ಸಂಸ್ಕೃತಿ”
ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಏನು ನಮೂದಿಸಬೇಕು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಲಿಂಗಾಯತ ಮತ್ತು ಹಿಂದೂ ಧರ್ಮಗಳು ಧರ್ಮಗಳೇ ಅಲ್ಲ, ಅವು ಕೇವಲ ಸಂಸ್ಕೃತಿಗಳು. ಶರಣ ತತ್ವ ಮತ್ತು ಲಿಂಗಾಯತ ತತ್ವಧಾರಿತ ಚಳವಳಿಗಳು ಅಷ್ಟೇ. ವೀರಶೈವ ಮತ್ತು ಲಿಂಗಾಯತ ಮತಗಳಲ್ಲೇ ಅನೇಕ ಗೊಂದಲಗಳಿವೆ,” ಎಂದು ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ವೈಯಕ್ತಿಕ ನಿಲುವನ್ನು ಸ್ಪಷ್ಟಪಡಿಸಿದ ರಾಯರೆಡ್ಡಿ, “ಜಾತಿ ಗಣತಿಯಲ್ಲಿ ನನ್ನ ಧರ್ಮ ಯಾವುದು ಎಂದು ಕೇಳಿದರೆ, ನನಗೆ ಯಾವುದೇ ಧರ್ಮವಿಲ್ಲ ಎಂದು ಬರೆಸುತ್ತೇನೆ. ಇದು ನನ್ನ ವೈಯಕ್ತಿಕ ವಿಚಾರ. ಆದರೆ, ನನ್ನ ಪತ್ನಿ ಏನು ಬರೆಸುತ್ತಾರೋ ಅದಕ್ಕೆ ನಾನೇನೂ ಹೇಳಲು ಸಾಧ್ಯವಿಲ್ಲ,” ಎಂದು ತಿಳಿಸಿದ್ದಾರೆ.
ಹಿಂದೂ vs ಲಿಂಗಾಯತ ಸಮರಕ್ಕೆ ತಿರುಗಿದ ಜಾತಿ ಗಣತಿ?
ಬಸವರಾಜ ರಾಯರೆಡ್ಡಿ ಅವರ ಈ ಹೇಳಿಕೆಯು ರಾಜ್ಯದಲ್ಲಿ ಈಗಾಗಲೇ ನಡೆಯುತ್ತಿರುವ ಚರ್ಚೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಒಂದೆಡೆ, ಲಿಂಗಾಯತ ಸಮುದಾಯದ ಪ್ರಬಲ ಮಠಾಧೀಶರು ಜಾತಿ ಗಣತಿಯಲ್ಲಿ ಧರ್ಮದ ಕಾಲಂನಲ್ಲಿ ‘ಲಿಂಗಾಯತ’ ಎಂದೇ ನಮೂದಿಸುವಂತೆ ತಮ್ಮ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಮತ್ತೊಂದೆಡೆ, ಪಂಚಮಸಾಲಿ ಸಮುದಾಯದ ಜಾಗೃತ ಸಭೆಗಳಲ್ಲಿ ‘ಹಿಂದೂ’ ಎಂದೇ ಬರೆಸುವಂತೆ ಒತ್ತಾಯಿಸಲಾಗುತ್ತಿದೆ. ಈ ಪರಸ್ಪರ ವಿರೋಧಿ ಕರೆಗಳಿಂದಾಗಿ ಜಾತಿ ಗಣತಿಯು ‘ಹಿಂದೂ ವರ್ಸಸ್ ಲಿಂಗಾಯತ’ ಎಂಬ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಈ ನಡುವೆ, ರಾಯರೆಡ್ಡಿ ಅವರ ಹೇಳಿಕೆಯು ಹೊಸ ಚರ್ಚೆಗೆ ನಾಂದಿ ಹಾಡಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.








