ಬೆಂಗಳೂರು: ಬೆಂಗಳೂರಿನ ಉದ್ಯಮಿಗಳನ್ನು ಆಂಧ್ರಪ್ರದೇಶಕ್ಕೆ ಆಹ್ವಾನಿಸುವ ಕುರಿತು ಆಂಧ್ರ ಸರ್ಕಾರದ ಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಆಂಧ್ರದಲ್ಲಿ ಜನ ಇಲ್ಲ, ಅದಕ್ಕೆ ಕರೆಯುತ್ತಿದ್ದಾರೆ. ಬರುವವರಿದ್ದರೆ ಕರೆದುಕೊಂಡು ಹೋಗಲಿ, ಯಾರು ಬೇಡ ಅಂತ ಹೇಳುತ್ತಾರೆ?” ಎಂದು ಅವರು ಹೇಳಿದ್ದಾರೆ.
ಇದೇ ವೇಳೆ, ಬೆಂಗಳೂರಿನ ರಸ್ತೆ ಗುಂಡಿಗಳ ಕುರಿತಾದ ಟೀಕೆಗಳಿಗೆ ಉತ್ತರಿಸಿದ ಅವರು, ಈಗಾಗಲೇ ರಸ್ತೆ ದುರಸ್ತಿಗಾಗಿ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ ಮತ್ತು ಹೊಣೆಗಾರಿಕೆ ನಿಗದಿಪಡಿಸಲಾಗಿದೆ ಎಂದರು. ವಿಶ್ವದ ಪ್ರತಿಷ್ಠಿತ ಕಂಪನಿಗಳು ಮತ್ತು ಲಕ್ಷಾಂತರ ಇಂಜಿನಿಯರ್ಗಳು ಬೆಂಗಳೂರಿನಲ್ಲಿಯೇ ಇರುವುದು ಇಲ್ಲಿನ ವ್ಯವಸ್ಥೆಯು ಉತ್ತಮವಾಗಿರುವುದಕ್ಕೆ ಸಾಕ್ಷಿ ಎಂದು ಶಿವಕುಮಾರ್ ಒತ್ತಿ ಹೇಳಿದರು. ರಸ್ತೆ ಗುಂಡಿಗಳ ವಿಷಯದಲ್ಲಿ ನಡೆಯುತ್ತಿರುವ ರಾಜಕೀಯದ ಕುರಿತು ಮಾತನಾಡಿದ ಅವರು, ರಾಜಕೀಯ ಮಾಡುವ ಆಸೆ ಇರುವವರು
ಚುನಾವಣೆಗೆ ಸ್ಪರ್ಧಿಸಲಿ ಎಂದು ಸವಾಲು ಹಾಕಿದರು.
ಕುಮಾರಸ್ವಾಮಿಗೆ ಡಿ.ಕೆ. ಶಿವಕುಮಾರ್ ಏಕವಚನದಲ್ಲೇ ತಿರುಗೇಟು
ಬೆಂಗಳೂರು: ಬೆಂಗಳೂರಿನ ರಸ್ತೆಗಳ ಕುರಿತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಟೀಕೆಗಳಿಗೆ ಡಿ.ಕೆ. ಶಿವಕುಮಾರ್ ಅವರು ಏಕವಚನದಲ್ಲಿ ತಿರುಗೇಟು ನೀಡಿದ್ದಾರೆ. “ನೀನು ರಾಜ್ಯದ ಸಂಸದ, ಕೇಂದ್ರ ಸಚಿವನಿದ್ದೀಯ, ಬೆಂಗಳೂರಿಗೆ ನಿನ್ನ ಕೊಡುಗೆ ಏನು ಹೇಳಪ್ಪ?” ಎಂದು ಶಿವಕುಮಾರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಕೇಂದ್ರ ಸರ್ಕಾರದಿಂದ ನಗರದ ಅಭಿವೃದ್ಧಿಗೆ ₹10,000 ಕೋಟಿ ಅನುದಾನ ಕೊಡಿಸಲಿ ಎಂದು ಅವರು ಸವಾಲು ಹಾಕಿದರು. ಈ ಹಿಂದೆ ಕುಮಾರಸ್ವಾಮಿ ಅವರು ಮೇಕೆದಾಟು ಮತ್ತು ಮಹದಾಯಿ ಯೋಜನೆಗಳಿಗೆ ಅನುಮತಿ ಕೊಡಿಸುವುದಾಗಿ ಹೇಳಿದ್ದರೂ ಏಕೆ ಮಾಡಲಿಲ್ಲ ಎಂದು ಪ್ರಶ್ನಿಸಿದ ಶಿವಕುಮಾರ್, ಕೇವಲ ಟ್ವೀಟ್ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದರು.








