ರಾಮನಗರ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬದಲಿಸುವುದು ವಿರೋಧ ಪಕ್ಷಗಳ ಹಣೆಬರಹದಲ್ಲಿಲ್ಲ ಎಂದು ಗುಡುಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 2028ರಲ್ಲಿಯೂ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ, ನೀವು ಅಧಿಕಾರವನ್ನು ಮರೆತುಬಿಡಿ ಎಂದು ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ನೇರ ಸವಾಲು ಹಾಕಿದ್ದಾರೆ.
ಶುಕ್ರವಾರ ರಾಮನಗರದಲ್ಲಿ ಆಯೋಜಿಸಲಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ರಾಜಕೀಯ ವಿರೋಧಿಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಾ. ಅಶ್ವತ್ಥ್ ನಾರಾಯಣ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಲ್ಲದೆ, ರಾಮನಗರಕ್ಕೆ 100 ಎಕರೆ ಜಮೀನಿನಲ್ಲಿ ನಿವೇಶನ ಹಂಚಿಕೆಯ ಬೃಹತ್ ಯೋಜನೆಯನ್ನು ಘೋಷಿಸಿದರು.
“ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲಿಯೇ ಬದುಕುತ್ತೇನೆ, ಇಲ್ಲಿಯೇ ಸಾಯುತ್ತೇನೆ. ಇದು ನಮ್ಮ ಜಿಲ್ಲೆ. ಇಲ್ಲಿನ ಜನರಿಗೆ ಶಕ್ತಿ ನೀಡುವುದೇ ನನ್ನ ಆದ್ಯತೆ,” ಎಂದು ಭಾವನಾತ್ಮಕವಾಗಿ ನುಡಿದರು.
“ಅಧಿಕಾರ ಮರೆತುಬಿಡಿ, ಗ್ಯಾರಂಟಿಗಳು ಶಾಶ್ವತ”
ವಿರೋಧ ಪಕ್ಷಗಳ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿಕೆಶಿ, “ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ತೆಗೆದುಹಾಕುವುದಾಗಿ ಯಾರೋ ಹೇಳಿದ್ದಾರೆ. ಮಿಸ್ಟರ್ ಅಶೋಕ್, ಅಶ್ವತ್ಥ್ ನಾರಾಯಣ್, ಜನತಾದಳದ ನಾಯಕರೇ, ನಿಮ್ಮ ಯಾರ ಹಣೆಯಲ್ಲೂ ನಮ್ಮ ಯೋಜನೆಗಳನ್ನು ಬದಲಾಯಿಸುವ ಬಗ್ಗೆ ಬರೆದಿಲ್ಲ. ಅಶೋಕಣ್ಣಾ, 2028ಕ್ಕೆ ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆಯೇ? ಖಂಡಿತ ಇಲ್ಲ, ಮತ್ತೆ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ನೀವು ಅಧಿಕಾರವನ್ನು ಮರೆತುಬಿಡಿ,” ಎಂದು ವ್ಯಂಗ್ಯವಾಡಿದರು.
“ಆಧಾರ್ ಕಾರ್ಡ್, ಪಿಂಚಣಿ, ಉಳುವವನೆ ಭೂಮಿಯ ಒಡೆಯನಂತಹ ಕಾಂಗ್ರೆಸ್ ಯೋಜನೆಗಳನ್ನು ಬಿಜೆಪಿ ಬದಲಿಸಲು ಆಗಲಿಲ್ಲ. ಅದೇ ರೀತಿ, ಮರುಜನ್ಮವೆತ್ತಿ ಬಂದರೂ ದಳ ಮತ್ತು ಬಿಜೆಪಿಯವರಿಂದ ನಮ್ಮ ಪಂಚ ಗ್ಯಾರಂಟಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ಮಾತನ್ನು ನಾನು ದೇವರಾಜ ಅರಸು ಅವರ ಭಾವಚಿತ್ರದ ಮುಂದೆ ನಿಂತು ಹೇಳುತ್ತಿದ್ದೇನೆ,” ಎಂದು ಅವರು ಸವಾಲು ಹಾಕಿದರು.
ರಾಮನಗರಕ್ಕೆ 100 ಎಕರೆ ನಿವೇಶನ ಭಾಗ್ಯ
ತಮ್ಮ ಕ್ಷೇತ್ರದ ಜನತೆಗೆ ಬೃಹತ್ ಕೊಡುಗೆಯೊಂದನ್ನು ಪ್ರಕಟಿಸಿದ ಅವರು, “ರಾಮನಗರ ಕ್ಷೇತ್ರದ ಜನತೆಗೆ 100 ಎಕರೆ ಪ್ರದೇಶದಲ್ಲಿ ನಿವೇಶನ ಹಂಚಲು ಈಗಾಗಲೇ ತೀರ್ಮಾನಿಸಲಾಗಿದೆ. ಬಗರ್ ಹುಕುಂ ಸೇರಿದಂತೆ ಭೂ ಸುಧಾರಣಾ ಕಾಯ್ದೆಯಡಿ ಬಾಕಿ ಇರುವ ಭೂಮಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ,” ಎಂದರು. ಕನಕಪುರದಲ್ಲಿ ಈಗಾಗಲೇ 8 ಸಾವಿರ ಮಂದಿಗೆ ಬಗರ್ ಹುಕುಂ ಜಮೀನು ನೀಡಿರುವುದನ್ನು ಅವರು ಸ್ಮರಿಸಿದರು.
ಕುಮಾರಸ್ವಾಮಿ, ಅಶ್ವತ್ಥ್ ನಾರಾಯಣ್ ವಿರುದ್ಧ ವಾಗ್ದಾಳಿ
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿ ಮಾತನಾಡಿದ ಡಿಕೆಶಿ, “ಕುಮಾರಸ್ವಾಮಿ ಜಿಲ್ಲೆಯಿಂದ ಎರಡು ಬಾರಿ ಮುಖ್ಯಮಂತ್ರಿಯಾದರೂ ಬಡವರಿಗೆ ಒಂದು ನಿವೇಶನ ಹಂಚಲು ಆಗಲಿಲ್ಲ. ಹೀಗಿರುವಾಗ ರಾಜಕಾರಣವನ್ನೇಕೆ ಮಾಡಬೇಕು?” ಎಂದು ಪ್ರಶ್ನಿಸಿದರು.
ಇದೇ ವೇಳೆ, ಮಾಜಿ ಸಚಿವ ಡಾ. ಅಶ್ವತ್ಥ್ ನಾರಾಯಣ್ ಅವರನ್ನೂ ಟೀಕಿಸಿದ ಅವರು, “ಜಿಲ್ಲೆಗೆ ಬಂದು ‘ಯಾರಾದರೂ ಗಂಡಸರು ಇದ್ದೀರಾ?’ ಎಂದು ಕೇಳಿದ ವೀರಾಧಿವೀರ ಗಂಡು ಅವರಿಗೂ ಒಂದೇ ಒಂದು ನಿವೇಶನ ಹಂಚಲಾಗಲಿಲ್ಲ. ಅಧಿಕಾರದಲ್ಲಿದ್ದಾಗ ಏನನ್ನೂ ಮಾಡದವರು ಇನ್ನೆಂದಿಗೂ ಮಾಡಲು ಸಾಧ್ಯವಿಲ್ಲ,” ಎಂದು ಅಲ್ಲಮ ಪ್ರಭುಗಳ ವಚನವನ್ನು ಉಲ್ಲೇಖಿಸಿ ಕುಟುಕಿದರು.
ದೇವರಾಜ ಅರಸು, ಬಂಗಾರಪ್ಪ ಸ್ಮರಣೆ
ದೇವರಾಜ ಅರಸು ಅವರ ಕಾರ್ಯಗಳನ್ನು ಸ್ಮರಿಸಿದ ಶಿವಕುಮಾರ್, “ಅರಸು ಅವರು ರಾಜಮನೆತನದಿಂದ ಬಂದರೂ ಬಡವರ ಪರವಾಗಿ ನಿಂತು ‘ಉಳುವವನೆ ಭೂಮಿಯ ಒಡೆಯ’ ಕಾನೂನು, ವೃದ್ಧಾಪ್ಯ ವೇತನ, ವಿಧವಾ ಪಿಂಚಣಿಯಂತಹ ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತಂದರು,” ಎಂದರು.
ತಮ್ಮ ರಾಜಕೀಯ ಬೆಳವಣಿಗೆಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರನ್ನು ನೆನೆದ ಅವರು, “ಹಿಂದುಳಿದ ವರ್ಗದ ನಾಯಕ ಬಂಗಾರಪ್ಪನವರು ನನ್ನನ್ನು ಬೆಳೆಸಿದರು. ಅವರ ಋಣ ತೀರಿಸಲು ಅವರ ಪುತ್ರ ಮಧು ಬಂಗಾರಪ್ಪ ಅವರನ್ನು ದಳದಿಂದ ಕರೆತಂದು ಸಚಿವನನ್ನಾಗಿ ಮಾಡಿದ್ದೇನೆ,” ಎಂದು ಹೇಳಿದರು.
ಜಾತಿ ಸಮೀಕ್ಷೆಯಲ್ಲಿ ಸರಿಯಾದ ಮಾಹಿತಿ ನೀಡಿ
“ಓಬಿಸಿಗಳ ಏಳಿಗೆಗಾಗಿ ಸಮೀಕ್ಷೆ ನಡೆಸಲಾಗುತ್ತಿದೆ. ಪ್ರತಿಯೊಬ್ಬರೂ ತಮ್ಮ ಜಾತಿಯನ್ನು ಸರಿಯಾಗಿ ನಮೂದಿಸಬೇಕು. ಇಲ್ಲದಿದ್ದರೆ ಇಡೀ ಸಮಾಜಕ್ಕೆ ಅನ್ಯಾಯ ಮಾಡಿದಂತೆ,” ಎಂದು ಜನರಲ್ಲಿ ಮನವಿ ಮಾಡಿದರು.








