ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ನಡುವಿನ ರಾಜಕೀಯ ವಾಕ್ಸಮರ ಮತ್ತಷ್ಟು ತೀವ್ರಗೊಂಡಿದ್ದು, ತಮ್ಮ ಮೇಲಿನ ಎಲ್ಲಾ ಆರೋಪಗಳ ಕುರಿತು ಬಹಿರಂಗ ಚರ್ಚೆಗೆ ಸಿದ್ಧ ಎಂದು ಡಿಕೆ ಶಿವಕುಮಾರ್ ಅವರು ಕುಮಾರಸ್ವಾಮಿಯವರಿಗೆ ಸವಾಲು ಹಾಕಿದ್ದಾರೆ.
ಬಿಡದಿ ಟೌನ್ಶಿಪ್ ವಿಚಾರವಾಗಿ ಕುಮಾರಸ್ವಾಮಿ ಮಾಡಿದ ‘ರಿಯಲ್ ಎಸ್ಟೇಟ್’ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿಸಿಎಂ, “ರಿಯಲ್ ಎಸ್ಟೇಟ್ ಬಗ್ಗೆ ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ನನಗಿಲ್ಲ. ನಾನೇನು ಹೊರಗಿನಿಂದ ಬಂದು ಇಲ್ಲಿ ಜಮೀನು ಖರೀದಿಸಿಲ್ಲ. ಈ ನೆಲದ ಮಗ ನಾನು,” ಎಂದು ತಿರುಗೇಟು ನೀಡಿದರು.
‘ಹಿಟ್ ಅಂಡ್ ರನ್’ ಆರೋಪಕ್ಕೆ ಅಂತ್ಯ ಹಾಡಬೇಕು
ತಮ್ಮ ವಿರುದ್ಧ ‘ಬ್ರಾಹ್ಮಣರ ಜಮೀನು ಲೂಟಿ ಮಾಡಿದ್ದಾರೆ’ ಎಂಬ ಕುಮಾರಸ್ವಾಮಿಯವರ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಡಿಕೆ ಶಿವಕುಮಾರ್, “ನನಗೆ ಬ್ರಾಹ್ಮಣರ ಜಮೀನು ಲೂಟಿ ಮಾಡುವಂತಹ ದಾರಿದ್ರ್ಯ ಬಂದಿಲ್ಲ. ಈ ಆರೋಪದ ಬಗ್ಗೆ ಕುಮಾರಸ್ವಾಮಿ ಈಗಲೂ ಅಧಿಕೃತವಾಗಿ ದೂರು ದಾಖಲಿಸಿ, ಯಾವುದೇ ಸಂಸ್ಥೆಯಿಂದ ತನಿಖೆ ಮಾಡಿಸಲಿ. ಸತ್ಯಾಸತ್ಯತೆ ಜನರಿಗೆ ತಿಳಿಯಲಿ,” ಎಂದು ಹೇಳಿದರು.
ಕುಮಾರಸ್ವಾಮಿ ಅವರು ನನ್ನ ವಿಚಾರದಲ್ಲಿ ಕೇವಲ ‘ಹಿಟ್ ಅಂಡ್ ರನ್’ ನೀತಿ ಅನುಸರಿಸುತ್ತಿದ್ದಾರೆ. ಸುಳ್ಳು ಆರೋಪ ಮಾಡಿ ಓಡಿಹೋಗುವುದು ಅವರ ಚಾಳಿಯಾಗಿದೆ. ಇದಕ್ಕೆ ಎಲ್ಲೋ ಒಂದು ಕಡೆ ಕೊನೆಯಾಗಬೇಕು. ಅವರ ಬಳಿ ನನ್ನ ವಿರುದ್ಧ ಯಾವುದೇ ಆರೋಪಗಳಿದ್ದರೂ, ಅದನ್ನು ಹಿಡಿದುಕೊಂಡು ಬಹಿರಂಗ ಚರ್ಚೆಗೆ ಬರಲಿ, ನಾನು ಸಿದ್ಧ, ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದರು.
ಜೈಲಿಗೆ ಕಳುಹಿಸುವ ಷಡ್ಯಂತ್ರ
ಡಿಕೆ ಶಿವಕುಮಾರ್ ಜೈಲಿಗೆ ಹೋಗುವ ದಿನಗಳು ಹತ್ತಿರದಲ್ಲಿವೆ, ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನನ್ನನ್ನು ಹೇಗಾದರೂ ಮಾಡಿ ಜೈಲಿಗೆ ಕಳುಹಿಸಲೇಬೇಕು ಎಂದು ಅವರು ಪಣತೊಟ್ಟು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂಬುದು ಅವರ ಮಾತುಗಳಲ್ಲೇ ಸ್ಪಷ್ಟವಾಗುತ್ತಿದೆ. ಅವರ ಈ ಹೇಳಿಕೆಗೆ ಹಬ್ಬ ಮುಗಿದ ನಂತರ ಸೂಕ್ತ ಉತ್ತರ ನೀಡುತ್ತೇನೆ,” ಎಂದು ಎಚ್ಚರಿಸಿದರು.
ಕುಮಾರಸ್ವಾಮಿ ಮತ್ತು ಅವರ ಕುಟುಂಬವು ತಮ್ಮ ಕುಟುಂಬದ ಮೇಲೆ ನಿರಂತರವಾಗಿ ಷಡ್ಯಂತ್ರ ನಡೆಸುತ್ತಾ ಬಂದಿದೆ ಎಂದು ಆರೋಪಿಸಿದ ಡಿಕೆಶಿ, “ಈ ಷಡ್ಯಂತ್ರ ಹೊಸದೇನಲ್ಲ. ಈ ಹಿಂದೆ ನನ್ನ ಸಹೋದರ, ಸಹೋದರಿ ಸೇರಿದಂತೆ ಎಲ್ಲರ ಮೇಲೂ ಇಂತಹ ಪ್ರಯತ್ನಗಳನ್ನು ಮಾಡಿದ್ದರು. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ಇದಕ್ಕೆಲ್ಲ ಒಂದು ಅಂತ್ಯ ಹಾಡಲೇಬೇಕು,” ಎಂದು ಆಕ್ರೋಶ ವ್ಯಕ್ತಪಡಿಸಿದರು.








