ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿಗಣತಿ) ಕೇವಲ ಸಮಾಜದ ಹಿತಕ್ಕಾಗಿ ಅಲ್ಲ, ಬದಲಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವನ್ನು ವಿಸ್ತರಿಸಿಕೊಳ್ಳಲು ಬಳಸುತ್ತಿರುವ ರಾಜಕೀಯ ಅಸ್ತ್ರ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರದ ಜಾತಿಗಣತಿ ನಡೆಗೆ ಭಾರತೀಯ ಜನತಾ ಪಕ್ಷವು ಎಂದಿಗೂ ವಿರೋಧ ವ್ಯಕ್ತಪಡಿಸಿಲ್ಲ. ಆದರೆ, ಯಾವುದೇ ಪೂರ್ವಸಿದ್ಧತೆಗಳಿಲ್ಲದೆ, ಅವೈಜ್ಞಾನಿಕವಾಗಿ ಸಮೀಕ್ಷೆ ನಡೆಸಲು ಹೊರಟಿರುವುದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಅಧಿಕಾರ ವಿಸ್ತರಣೆಗಾಗಿ ಸಮೀಕ್ಷೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರ “ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ” ಎಂಬ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, “ಈ ಸಮೀಕ್ಷೆಯಿಂದ ರಾಜ್ಯದ ಜನತೆಗಾಗಲಿ ಅಥವಾ ಸರ್ಕಾರಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ. ಇದರ ಏಕೈಕ ಲಾಭ ಪಡೆಯುವವರು ಮುಖ್ಯಮಂತ್ರಿ ಸಿದ್ದರಾಮಯ್ಯ. ನವೆಂಬರ್ನಲ್ಲಿ ಅವರ ಮುಖ್ಯಮಂತ್ರಿ ಅವಧಿ ಮುಗಿಯಲಿದೆ ಎಂಬ ಮಾತುಗಳಿವೆ. ಅದಕ್ಕಾಗಿಯೇ ಅವರು ತರಾತುರಿಯಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೇಲೆ ಒತ್ತಡ ಹೇರಿ ಈ ಸಮೀಕ್ಷೆ ಮಾಡಿಸುತ್ತಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಕರನ್ನು ಅಮಾನತು ಮಾಡುವುದಲ್ಲ, ಮುಖ್ಯಮಂತ್ರಿಯನ್ನೇ ಅಮಾನತುಗೊಳಿಸಿ
ಪೂರ್ವತಯಾರಿ ಇಲ್ಲದೆ ಸಮೀಕ್ಷೆ ನಡೆಸುತ್ತಿರುವುದರಿಂದ ಕ್ಷೇತ್ರಕಾರ್ಯದಲ್ಲಿ ನಿರತರಾಗಿರುವ ಶಿಕ್ಷಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಸಮೀಕ್ಷೆ ಮಾಡದಿದ್ದರೆ ಅವರನ್ನು ಅಮಾನತು ಮಾಡುವ ಬೆದರಿಕೆ ಹಾಕಲಾಗುತ್ತಿದೆ. ನಿಜವಾಗಿ ಅಮಾನತು ಮಾಡಬೇಕಿರುವುದು ಅಮಾಯಕ ಶಿಕ್ಷಕರನ್ನಲ್ಲ, ಬದಲಾಗಿ ಇಂತಹ ಅವೈಜ್ಞಾನಿಕ ಸಮೀಕ್ಷೆಗೆ ಆದೇಶಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಎಂದು ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಒಡೆದು ಆಳುವ ನೀತಿಗೆ ನಮ್ಮ ವಿರೋಧ
ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವೇನಲ್ಲ ಎಂದು ನ್ಯಾಯಾಲಯವೇ ಸ್ಪಷ್ಟಪಡಿಸಿದೆ. ಹೀಗಾಗಿ, ಇದರಲ್ಲಿ ಪಾಲ್ಗೊಳ್ಳಬೇಕೇ ಅಥವಾ ಬೇಡವೇ ಎಂಬುದನ್ನು ರಾಜ್ಯದ ಜನರ ವಿವೇಚನೆಗೆ ಬಿಡುತ್ತೇವೆ. ಆದರೆ, ಯಾವುದೇ ಸಿದ್ಧತೆ ಇಲ್ಲದೆ ಸಂಗ್ರಹಿಸುವ ಮಾಹಿತಿಗಳು ಮತ್ತು ವೈಯಕ್ತಿಕ ಡೇಟಾ ಸೋರಿಕೆಯಾಗುವುದಿಲ್ಲ ಎಂದು ಸರ್ಕಾರದ ಬಳಿ ಯಾವ ಖಾತ್ರಿ ಇದೆ? ಎಂದು ಸುನಿಲ್ ಕುಮಾರ್ ಪ್ರಶ್ನಿಸಿದರು. “ಸಿದ್ದರಾಮಯ್ಯನವರು ಈ ಸಮೀಕ್ಷೆಯ ಮೂಲಕ ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದೆ,” ಎಂದರು.
ಹಿಂದಿನ ವರದಿಗಳಂತೆ ಇದೂ ಮೂಲೆಗುಂಪು
ಈ ಸಮೀಕ್ಷೆಯನ್ನು ನೂರಾರು ಸಂಘ-ಸಂಸ್ಥೆಗಳು ವಿರೋಧಿಸಿವೆ. ಹಿಂದುಳಿದ ವರ್ಗಗಳ ಆಯೋಗಕ್ಕೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸರ್ಕಾರ ಬಿಡುತ್ತಿಲ್ಲ. ಈ ಹಿಂದೆ ಸಿದ್ಧಪಡಿಸಲಾದ ಕಾಂತರಾಜ್ ವರದಿ, ಜಯಪ್ರಕಾಶ್ ಹೆಗಡೆ ವರದಿಯನ್ನು ಹೇಗೆ ಮೂಲೆಗುಂಪು ಮಾಡಲಾಯಿತೋ, ಅದೇ ರೀತಿ ಈ ಸಮೀಕ್ಷೆಯ ವರದಿಯೂ ಧೂಳು ಹಿಡಿಯಲಿದೆ ಎಂದು ಅವರು ಭವಿಷ್ಯ ನುಡಿದರು.
“ನಾವು ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ತತ್ವಕ್ಕೆ ಬದ್ಧರಾಗಿದ್ದೇವೆ. ಆದರೆ ಸಿದ್ದರಾಮಯ್ಯನವರದ್ದು ‘ಸಿದ್ದರಾಮಯ್ಯ ಕಾ ಸಾಥ್, ಸಿದ್ದರಾಮಯ್ಯ ಕಾ ವಿಕಾಸ್’ ಅಷ್ಟೇ. ಅವರ ಗುರಿ ಸಮ ಸಮಾಜ ನಿರ್ಮಾಣವಲ್ಲ, ಬದಲಾಗಿ ಸಮಾಜ ಒಡೆಯುವುದು. ಅವರ ಸಮ ಸಮಾಜದ ಮಾತುಗಳು ಕೇವಲ ಭಾಷಣಕ್ಕೆ ಸೀಮಿತ. ಸಿದ್ದರಾಮಯ್ಯ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ,” ಎಂದು ಸುನಿಲ್ ಕುಮಾರ್ ತೀವ್ರವಾಗಿ ಟೀಕಿಸಿದರು.








