ಬಿಷಪ್ ಫ್ರಾಂಕೋ ಮುಳಕಾಲ್ ಗೆ ಕೊರೊನಾ ಸೋಂಕು
ತಿರುವನಂತಪುರಂ, ಜುಲೈ 15: ಕೇರಳದಲ್ಲಿ ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿರುವ ಬಿಷಪ್ ಫ್ರಾಂಕೋ ಮುಳಕಾಲ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದಾಗಿ ತಿಳಿದು ಬಂದಿದೆ.
ಸೋಮವಾರ ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಬಿಷಪ್ ಫ್ರಾಂಕೋ ಮುಳಕಾಲ್ ಒಂದು ಬಾರಿಯೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ಜಾಮೀನು ರದ್ದು ಪಡಿಸಿತ್ತು ಮತ್ತು ಜಾಮೀನುರಹಿತ ವಾರೆಂಟ್ ಅನ್ನು ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಅವರ ಪರ ವಕೀಲ ಮನ್ ದೀಪ್ ಸಿಂಗ್ ಅವರು ಕೊಟ್ಟಾಯಂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯಕ್ಕೆ ಬಿಷಪ್ ಫ್ರಾಂಕೋ ಮುಳಕಾಲ್ ಅವರಿಗೆ ಕೊರೊನಾ ಸೋಂಕುತಗುಲಿರುವುದಾಗಿ ಮಾಹಿತಿ ನೀಡಿದ್ದಾರೆ.

ಲುಧಿಯಾನದಲ್ಲಿ ತಮ್ಮ ವಕೀಲರ ಸಂಪರ್ಕದಿಂದ ಅವರಿಗೆ ಕೊರೊನಾ ಸೋಂಕು ತಗುಲಿದ್ದು, ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅವರು ಕ್ವಾರಂಟೈನ್ ನಲ್ಲಿದ್ದು, ಕೋರ್ಟ್ ಗೆ ಖುದ್ದಾಗಿ ಹಾಜರಾಗಲಿಲ್ಲ ಎಂದು ಮುಳಕಾಲ್ ಪರ ವಕೀಲರು ಕೋರ್ಟ್ ಗೆ ತಿಳಿಸಿದ್ದಾರೆ








