ಚನ್ನಪಟ್ಟಣ: “ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾನೇನು ಆಸಕ್ತಿ ತೋರಿರಲಿಲ್ಲ. ಪಕ್ಷ ಮತ್ತು ನಿಮ್ಮೆಲ್ಲರ ಒತ್ತಾಯಕ್ಕೆ ಮಣಿದು ಅಖಾಡಕ್ಕಿಳಿದು ತಲೆಕೊಟ್ಟೆ. ಈ ಸೋಲಿನಿಂದ ರಾಜಕೀಯವಾಗಿ ನನಗಾಗಿರುವ ಪೆಟ್ಟು ಬೇರೆ ಯಾರಿಗಾದರೂ ಆಗಿದ್ದರೆ ಮನೆಯಿಂದ ಹೊರಬರುತ್ತಿರಲಿಲ್ಲ. ಆದರೆ, ನಾನು ಸೋಲನ್ನು ಮರೆತು ಪಕ್ಷ ಸಂಘಟನೆಗಾಗಿ ನಿಮ್ಮ ಮುಂದೆ ಬಂದು ನಿಂತಿದ್ದೇನೆ,” ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಮ್ಮ ನೋವನ್ನು ಹೊರಹಾಕಿದರು.
ತಾಲೂಕಿನ ದೊಡ್ಡಮಳೂರು ಗ್ರಾಮದ ಸಾಯಿ ಮಂದಿರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಕ್ಷದೊಳಗಿನ ಹಲವು ಬೆಳವಣಿಗೆಗಳ ಬಗ್ಗೆ ಅಸಮಾಧಾನ ಮತ್ತು ಬೇಸರವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು.
ನನ್ನ ತಲೆಗೆ ಕಟ್ಟಿದರು
ಚುನಾವಣೆಯ ದಿನಗಳನ್ನು ನೆನಪಿಸಿಕೊಂಡ ನಿಖಿಲ್, “ಮೊದಲು ಮಂಡ್ಯದಲ್ಲಿ ಸ್ಪರ್ಧಿಸುವಂತೆ ಒತ್ತಡ ಬಂದಾಗ ನಾನು ಸ್ಪಷ್ಟವಾಗಿ ನಿರಾಕರಿಸಿದ್ದೆ. ಚನ್ನಪಟ್ಟಣದಲ್ಲಿ ಜಯಮುತ್ತು ಅಥವಾ ಹಾಪ್‌ಕಾಮ್ಸ್ ದೇವರಾಜು ಅವರಲ್ಲಿ ಒಬ್ಬರು ಅಭ್ಯರ್ಥಿಯಾಗಲಿ ಎಂದು ಕುಮಾರಣ್ಣನವರು ಸೂಚಿಸಿದ್ದರು. ಆದರೆ, ಅಂತಿಮವಾಗಿ ಎಲ್ಲರೂ ಸೇರಿ ನನ್ನ ತಲೆಗೆ ಜವಾಬ್ದಾರಿಯನ್ನು ಕಟ್ಟಿದರು. ಪಕ್ಷಕ್ಕಾಗಿ ನಾನು ಅದನ್ನು ಒಪ್ಪಿಕೊಂಡೆ. ಸೋತ ಬಳಿಕವೂ ನಾನು ಮನೆಯಲ್ಲಿ ಸುಮ್ಮನೆ ಕುಳಿತಿಲ್ಲ. ಪಕ್ಷವನ್ನು ಮತ್ತೆ ಬೇರುಮಟ್ಟದಿಂದ ಕಟ್ಟುವ ಕೆಲಸದಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ,” ಎಂದರು.
ಪ್ರಾಮಾಣಿಕರು ಯಾರೆಂದು ಆತ್ಮಾವಲೋಕನ ಮಾಡಿಕೊಳ್ಳಿ
ಪಕ್ಷದೊಳಗಿನ ಕೆಲ ಮುಖಂಡರ ನಡೆಯ ಬಗ್ಗೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, “ಇದು ನೀವು ಬೆವರು ಸುರಿಸಿ ಕಟ್ಟಿರುವ ಪಕ್ಷ. ಇಲ್ಲಿ ಪ್ರಾಮಾಣಿಕರು ಯಾರು ಮತ್ತು ಅಪ್ರಾಮಾಣಿಕರು ಯಾರು ಎಂಬುದನ್ನು ನಿಮ್ಮ ಮನಸಾಕ್ಷಿಯನ್ನು ಕೇಳಿಕೊಂಡರೆ ಸತ್ಯ ತಿಳಿಯುತ್ತದೆ,” ಎಂದು ಚಾಟಿ ಬೀಸಿದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು ಅವರ ರಾಜೀನಾಮೆ ಪ್ರಸ್ತಾಪದ ಬಗ್ಗೆ ಮಾತನಾಡಿದ ನಿಖಿಲ್, “ಎರಡು ತಿಂಗಳ ಹಿಂದೆಯೇ ದೆಹಲಿಯಲ್ಲಿ ನನ್ನನ್ನು ಭೇಟಿಯಾಗಿದ್ದ ಜಯಮುತ್ತು, ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದರು. ಇದೇ ನವೆಂಬರ್ ವೇಳೆಗೆ ರಾಜ್ಯದ ಕೆಲವು ಜಿಲ್ಲೆಗಳ ಅಧ್ಯಕ್ಷರ ಬದಲಾವಣೆ ಆಗಲಿದೆ. ಚನ್ನಪಟ್ಟಣದಲ್ಲಿ ಜಯಮುತ್ತು ಅವರನ್ನೇ ಮುಂದುವರಿಸುವುದಾದರೆ ಮುಂದುವರಿಸಿ, ಇಲ್ಲವಾದಲ್ಲಿ ನೀವೆಲ್ಲರೂ ಸೇರಿ ಮೂರು ನಾಲ್ಕು ಸಮರ್ಥರ ಹೆಸರನ್ನು ಅಂತಿಮಗೊಳಿಸಿ ಕಳುಹಿಸಿ,” ಎಂದು ಸ್ಥಳೀಯ ಮುಖಂಡರಿಗೆ ಜವಾಬ್ದಾರಿ ನೀಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ಇದೇ ವೇಳೆ, ರಾಜ್ಯ ಸರ್ಕಾರದ ವಿರುದ್ಧವೂ ಹರಿಹಾಯ್ದ ಅವರು, “ಬಮೂಲ್ ಚುನಾವಣೆಯಲ್ಲಿ ಸರ್ಕಾರಿ ಅಧಿಕಾರಿಗಳು ಹೇಗೆ అధికార ದುರ್ಬಳಕೆ ಮಾಡಿಕೊಂಡು ಕುಣಿದರು ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಕಾಂಗ್ರೆಸ್‌ನವರು ಅಧಿಕಾರವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ನಮಗೆ ಕಲಿಸಿದ್ದಾರೆ. ನಿಮ್ಮ ಮೇಲೆ ನೂರು ಕೇಸ್ ಹಾಕಿದರೂ ತಲೆಕೆಡಿಸಿಕೊಳ್ಳಬೇಡಿ, ಪಕ್ಷ ನಿಮ್ಮ ಜೊತೆ ಇರುತ್ತದೆ,” ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
“ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗುವ ದಿನ ದೂರವಿಲ್ಲ. ಆ ದಿನ ಅವರು ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತಾಗ ನಾನು ಯಾವುದೇ ಅಧಿಕಾರ ಸ್ವೀಕರಿಸುವುದಿಲ್ಲ. ಬದಲಿಗೆ, ಯಾವೆಲ್ಲಾ ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಅಧಿಕಾರ ಸಿಕ್ಕಿಲ್ಲವೋ, ಅಂತಹವರನ್ನು ಗುರುತಿಸಿ ಅವರಿಗೆ ಅಧಿಕಾರ ಕೊಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ,” ಎಂದು ನಿಖಿಲ್ ಕುಮಾರಸ್ವಾಮಿ ಘೋಷಿಸಿದರು.
“ಮಾತೆತ್ತಿದರೆ ಜೆಡಿಎಸ್ ವಿಲೀನವಾಗುತ್ತದೆ ಎಂದು ಅಪಪ್ರಚಾರ ಮಾಡುತ್ತಾರೆ. ನಮ್ಮ ಕಾರ್ಯಕರ್ತರು ಅಷ್ಟು ಅಸಮರ್ಥರೇ? ಪಕ್ಷವನ್ನು ಉಳಿಸಿ, ಕುಮಾರಣ್ಣನವರನ್ನು ಮತ್ತೊಮ್ಮೆ ಮುಖ್ಯಮಂತ್ರಿ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ,” ಎಂದು ಹೇಳುವ ಮೂಲಕ ಪಕ್ಷ ವಿಲೀನದ ವದಂತಿಗಳಿಗೆ ತೆರೆ ಎಳೆದರು.
ಸಭೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಜಯಮುತ್ತು, ಒಕ್ಕಲಿಗರ ಸಂಘದ ನಿರ್ದೇಶಕ ಹಾಪ್‌ಕಾಮ್ಸ್ ದೇವರಾಜು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು ಸೇರಿದಂತೆ ಹಲವು ಪ್ರಮುಖ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.








